ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡು ಪ್ರಯತ್ನಗಳಲ್ಲಿ ಪರೀಕ್ಷೆ ಪೂರ್ಣಗೊಳಿಸಲು ಅವಕಾಶ ನೀಡಿ

ವಿದೇಶಗಳಿಂದ ಹಿಂದಿರುಗಿರುವ ವಿದ್ಯಾರ್ಥಿಗಳ ಅರ್ಜಿ ವಿಚಾರಣೆ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ
Last Updated 28 ಮಾರ್ಚ್ 2023, 16:17 IST
ಅಕ್ಷರ ಗಾತ್ರ

ನವದೆಹಲಿ: ‘ಯುದ್ಧ ಹಾಗೂ ಕೋವಿಡ್‌ ಕಾರಣದಿಂದಾಗಿ ಉಕ್ರೇನ್‌, ಚೀನಾ ಮತ್ತು ಫಿಲಿಪ್ಪೀನ್ಸ್‌ನಿಂದ ವಾ‍‍ಪಾಸಾಗಿರುವ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಇಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಎರಡು ಪ್ರಯತ್ನಗಳಲ್ಲಿ ಪರೀಕ್ಷೆ ಪೂರ್ಣಗೊಳಿಸಲು ಅವಕಾಶ ನೀಡಿ’ ಎಂದು ಸುಪ್ರೀಂ ಕೋ‌ರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಈ ಸಂಬಂಧ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ವಿಕ್ರಂ ನಾಥ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಇವುಗಳ ವಿಚಾರಣೆ ನಡೆಸಿತು.

‘ಈ ವಿಚಾರವಾಗಿ ಸೂಕ್ತ ತೀರ್ಮಾನ ಕೈಗೊಳ್ಳಲು ಆರೋಗ್ಯ ಸೇವೆಗಳ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಇದರಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಕೆಲವರು ಇದ್ದರು. ವಿದೇಶಗಳಿಂದ ಹಿಂದಿರುಗಿರುವ ಎಂಬಿಬಿಎಸ್‌ ವಿದ್ಯಾರ್ಥಿಗಳು ಹಾಗೂ ಆನ್‌ಲೈನ್‌ ಮೂಲಕ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ಪರೀಕ್ಷೆ ಪೂರ್ಣಗೊಳಿಸಲು ಒಂದು ಅವಕಾಶ ಕಲ್ಪಿಸಬಹುದು ಎಂದು ಸಮಿತಿ ಶಿಫಾರಸು ಮಾಡಿದೆ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ಅವರು ನ್ಯಾಯಪೀಠಕ್ಕೆ ತಿಳಿಸಿದರು.

‘ಈಗಾಗಲೇ ಅಸ್ತಿತ್ವದಲ್ಲಿರುವ ಮಾರ್ಗಸೂಚಿಯ ಅನುಸಾರ ಭಾರತದಲ್ಲಿನ ಕಾಲೇಜುಗಳಿಗೆ ದಾಖಲಾಗದೆಯೇ ಭಾಗ–1 ಮತ್ತು ಭಾಗ–2 (ವಿಷಯಾಧಾರಿತ ಮತ್ತು ಪ್ರಾಯೋಗಿಕ) ಪರೀಕ್ಷೆಗಳನ್ನು ಒಂದೇ ಪ್ರಯತ್ನದಲ್ಲಿ ಪೂರ್ಣಗೊಳಿಸಲು ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿದ್ದೇವೆ’ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ.

‘ಭಾರತದಲ್ಲಿ ಅನುಸರಿಸಲಾಗುತ್ತಿರುವ ಮಾದರಿಯಲ್ಲೇ ವಿಷಯಾಧಾರಿತ ಪರೀಕ್ಷೆಯನ್ನು ಕೇಂದ್ರೀಯ ಹಾಗೂ ಭೌತಿಕವಾಗಿ ನಡೆಸಲಾಗುತ್ತದೆ. ಪ್ರಾಯೋಗಿಕ ಪರೀಕ್ಷೆಗಳನ್ನು ಗೊತ್ತುಪಡಿಸಿದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೈಗೊಳ್ಳಲಾಗುತ್ತದೆ. ಎರಡೂ ಪರೀಕ್ಷೆಗಳಲ್ಲೂ ಉತ್ತೀರ್ಣರಾದ ಬಳಿಕ ವಿದ್ಯಾರ್ಥಿಗಳು ಎರಡು ವರ್ಷಗಳ ಕಡ್ಡಾಯ ಇಂಟರ್ನ್‌ಶಿಪ್‌ ಪೂರ್ಣಗೊಳಿಸಬೇಕಾಗುತ್ತದೆ. ಮೊದಲ ವರ್ಷದ ಇಂಟರ್ನ್‌ಶಿಪ್‌ ಉಚಿತವಾಗಿರಲಿದ್ದು, ಎರಡನೇ ವರ್ಷದ ಇಂಟರ್ನ್‌ಶಿಪ್‌ಗಾಗಿ ಎನ್‌ಎಂಸಿ ನಿಗದಿಪಡಿಸಿರುವ ಶುಲ್ಕ ಪಾವತಿಸಬೇಕಾಗುತ್ತದೆ’ ಎಂದೂ ಹೇಳಲಾಗಿದೆ.

ವಿದ್ಯಾರ್ಥಿಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರಾದ ಎಸ್‌.ನಾಗಮುತ್ತು, ಗೋಪಾಲ ಶಂಕರನಾರಾಯಣನ್‌ ಹಾಗೂ ಇತರರು ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿದರು. ಇದರಿಂದ ವಿದ್ಯಾರ್ಥಿಗಳಿಗೆ ಆಗುವ ಅನಾನುಕೂಲಗಳೇನು ಎಂಬುದರ ಕುರಿತು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

‘ಕೇಂದ್ರ ಸರ್ಕಾರದಿಂದ ನೇಮಕಗೊಂಡಿದ್ದ ಸಮಿತಿಯು ನೀಡಿರುವ ಶಿಫಾರಸುಗಳನ್ನು ನಾವು ಸ್ವೀಕರಿಸುತ್ತೇವೆ. ಆದರೆ ಭಾಗ–1 ಮತ್ತು ಭಾಗ–2ರ ಪರೀಕ್ಷೆಗಳನ್ನು ಒಂದರ ಬದಲು ಎರಡು ಪ್ರಯತ್ನಗಳಲ್ಲಿ ಪೂರ್ಣಗೊಳಿಸುವುದಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುತ್ತಿದ್ದೇವೆ’ ಎಂದು ನ್ಯಾಯಪೀಠ ತಿಳಿಸಿತು.

ಮುಖ್ಯಾಂಶಗಳು

ಒಂದು ಪ್ರಯತ್ನದಲ್ಲಿ ಪರೀಕ್ಷೆ ಪೂರ್ಣಗೊಳಿಸಲು ಅವಕಾಶ ನೀಡಿದ್ದ ಸಮಿತಿ

ಕೇಂದ್ರದ ನಿಲುವಿಗೆ ವಿದ್ಯಾರ್ಥಿಗಳ ಪರ ವಕೀಲರ ವಿರೋಧ

ದ್ವಿಸದಸ್ಯ ನ್ಯಾಯಪೀಠದಿಂದ ಅರ್ಜಿಯ ವಿಚಾರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT