ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯರ ಸುರಕ್ಷತೆಗೆ ಮಾರ್ಗಸೂಚಿ ರಚನೆಗೆ 10 ಸದಸ್ಯರ ಕಾರ್ಯಪಡೆ ರಚಿಸಿದ ‘ಸುಪ್ರೀಂ’

Published 20 ಆಗಸ್ಟ್ 2024, 10:48 IST
Last Updated 20 ಆಗಸ್ಟ್ 2024, 10:48 IST
ಅಕ್ಷರ ಗಾತ್ರ

ನವದೆಹಲಿ: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ವೈದ್ಯರ ಕ್ಷೇಮ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮಾರ್ಗಸೂಚಿ ರಚನೆಗೆ ಸುಪ್ರೀಂ ಕೋರ್ಟ್‌ 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು(ಎನ್‌ಟಿಎಫ್) ರಚಿಸಿದೆ.

ವೈದ್ಯರ ಸುರಕ್ಷತೆ ಮತ್ತು ಕ್ಷೇಮವು ರಾಷ್ಟ್ರೀಯ ಹಿತಾಸಕ್ತಿಯಾಗಿದೆ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಕಾರ್ಯಪಡೆ ರಚಿಸಿದೆ.

3 ವಾರಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ವರದಿ ಸಲ್ಲಿಸಲಿರುವ ಕಾರ್ಯಪಡೆಯು, 2 ತಿಂಗಳೊಳಗೆ ಅಂತಿಮ ವರದಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲಿನ ಹಿಂಸಾಚಾರ ಮತ್ತು ಲೈಂಗಿಕ ದೌರ್ಜನ್ಯಗಳ ತಡೆಗೆ ಸಾಂಸ್ಥಿಕ ನಿಯಮಗಳು ಇಲ್ಲದೇ ಇರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗೆ ಶಾಸನಗಳಿವೆ. ಆದರೆ, ಅವುಗಳು ವ್ಯವಸ್ಥೆಯ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದು ಪೀಠ ಹೇಳಿದೆ.

10 ಸದಸ್ಯರ ಕಾರ್ಯಪಡೆಯಲ್ಲಿ ನೌಕಾಪಡೆಯ ವೈದ್ಯಕೀಯ ಸೇವೆಗಳ ಮಹಾ ನಿರ್ದೇಶಕಿ ವೈಸ್ ಅಡ್ಮಿರಲ್ ಆರತಿ ಸರಿನ್, ಹೈದರಾಬಾದ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಎಐಜಿ ಆಸ್ಪತ್ರೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಡಿ. ನಾಗೇಶ್ವರ ರೆಡ್ಡಿ, ದೆಹಲಿಯ ಏಮ್ಸ್ ನಿರ್ದೇಶಕ ಡಾ ಎಂ ಶ್ರೀನಿವಾಸ್, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಎಐಐಎಂಎಸ್ ಜೋಧ್‌ಪುರದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಗೋವರ್ಧನ್ ದತ್ ಪುರಿ, ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಡಾ ಸೌಮಿತ್ರಾ ರಾವತ್ ಪ್ರಮುಖರಾಗಿದ್ದಾರೆ.

ರೋಹ್ಟಕ್‌ನ ಪಂಡಿತ್ ಬಿ.ಡಿ. ಶರ್ಮಾ ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಅನಿತಾ ಸಕ್ಸೇನಾ, ದೆಹಲಿಯ ಏಮ್ಸ್‌ನ ಅಕಾಡೆಮಿಕ್ ಡೀನ್, ಕಾರ್ಡಿಯೋ ಥೋರಾಸಿಕ್ ಸೆಂಟರ್ ಮತ್ತು ಕಾರ್ಡಿಯಾಲಜಿ ಡಿಪಾರ್ಟ್ಮೆಂಟ್‌ನ ಮಾಜಿ ಅಧ್ಯಕ್ಷೆ, ಡಾ. ಪಲ್ಲವಿ ಸಪ್ಲೆ, ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜು ಮತ್ತು ಸರ್ ಜೆಜೆ ಗ್ರೂಪ್ ಆಫ್ ಹಾಸ್ಪಿಟಲ್ಸ್ ಡೀನ್ ಡಾ ಪದ್ಮಾ ಶ್ರೀವಾಸ್ತವ ಇತರೆ ‌‌‌ಸದಸ್ಯರಾಗಿದ್ದಾರೆ.

ಕೇಂದ್ರ ಸಂಪುಟದ ಕಾರ್ಯದರ್ಶಿ ಮತ್ತು ಕೇಂದ್ರ ಸರ್ಕಾರದ ಗೃಹ ಕಾರ್ಯದರ್ಶಿ, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರು ಮತ್ತು ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷರು ಕಾರ್ಯಪಡೆಯ ಪದನಿಮಿತ್ತ ಸದಸ್ಯರಾಗಿರುತ್ತಾರೆ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT