ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಸ್ಟರಿ ಶೀಟ್‌ ನೀತಿ ಮರುಪರಿಶೀಲಿಸಿ: ಸುಪ್ರೀಂ ಕೋರ್ಟ್‌

ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿದ ದ್ವಿಸದಸ್ಯ ಪೀಠ
Published 7 ಮೇ 2024, 16:24 IST
Last Updated 7 ಮೇ 2024, 16:24 IST
ಅಕ್ಷರ ಗಾತ್ರ

ನವದೆಹಲಿ: ಹಿಂದುಳಿದ ಸಮುದಾಯಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರು ಎನ್ನುವ ಕಾರಣಕ್ಕೆ ಮುಗ್ಧ ವ್ಯಕ್ತಿಗಳ ‘ಹಿಸ್ಟರಿ ಶೀಟ್‌’ನಲ್ಲಿ ಯಾಂತ್ರಿಕವಾಗಿ ನಮೂದುಗಳನ್ನು ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ. 

ಅಪರಾಧ ಹಿನ್ನೆಲೆ ಇರುವಂತಹವರ (‘ಹಿಸ್ಟರಿ ಶೀಟರ್‌’ಗಳು) ವಿರುದ್ಧ ಪೊಲೀಸರು ನಿರ್ವಹಿಸುವ ‘ಹಿಸ್ಟರಿ ಶೀಟ್‌’ಗಳಿಗೆ ಸಂಬಂಧಿಸಿ ಉದ್ದೇಶಿತ ‘ಕೆಟ್ಟ ನಡತೆ’ ಎನ್ನುವ ಪದ ಸೇರಿಸುವ ತಮ್ಮ ನೀತಿಯನ್ನು, ಅಪ್ರಾಪ್ತ ವಯಸ್ಸಿನವರು ಸೇರಿದಂತೆ ಅವರ ಕುಟುಂಬ ಸದಸ್ಯರ ಆತ್ಮಗೌರವ ಮತ್ತು ಗೋಪ್ಯತೆ ಕಾಪಾಡುವ ಸಲುವಾಗಿ ಮರುಪರಿಶೀಲಿಸಬೇಕು ಎಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು, ಮನುಷ್ಯನ ಘನತೆ ಮತ್ತು ಜೀವನದ ಮೌಲ್ಯವನ್ನು ನಮ್ಮ ಸಂವಿಧಾನದ 21ನೇ ವಿಧಿಯಲ್ಲಿ ಒತ್ತಿ ಹೇಳಲಾಗಿದೆ ಎಂದು ಪ್ರತಿಪಾದಿಸಿದೆ.  

ಮುಗ್ಧ ಜನರ ಘನತೆ, ಸ್ವಾಭಿಮಾನ ಮತ್ತು ಖಾಸಗಿತನವನ್ನು ರಕ್ಷಿಸಲು ‘ದೆಹಲಿ ಮಾದರಿ’ಯಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಬಹುದೇ ಎಂಬುದನ್ನು ಪರಿಗಣಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೀಠವು ಸೂಚಿಸಿದೆ.

ತನ್ನ ವಿರುದ್ಧ ‘ಹಿಸ್ಟರಿ ಶೀಟ್‌’ ತೆರೆಯುವ ಮತ್ತು ಉದ್ದೇಶಿತ ‘ಕೆಟ್ಟ ನಡತೆ’ಯ ವ್ಯಕ್ತಿ ಎಂದು ಘೋಷಿಸುವುದರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ 2023ರ ಜನವರಿ 19ರಂದು ದೆಹಲಿ ಹೈಕೋರ್ಟ್‌ ನೀಡಿದ ಆದೇಶವನ್ನು ಪ್ರಶ್ನಿಸಿರುವ ದೆಹಲಿ ಎಎಪಿ ಶಾಸಕ ಅಮಾನತ್‌ ಉಲ್ಲಾ ಖಾನ್ ಅವರ ಅರ್ಜಿ ವಿಚಾರಣೆ ವೇಳೆ ಪೀಠವು ಈ ಮಾತು ಹೇಳಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT