ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಂಜಲಿ ವಿಚಾರಣೆ ವ್ಯಾಪ್ತಿಯನ್ನು FMCGಗೂ ವಿಸ್ತರಿಸಿದ ಸುಪ್ರೀಂ ಕೋರ್ಟ್‌

67 ಪತ್ರಿಕೆಗಳಲ್ಲಿ ಬಾಬಾ ರಾಮದೇವ ಕ್ಷಮೆಯಾಚನೆ ಪ್ರಕಟ
Published 23 ಏಪ್ರಿಲ್ 2024, 12:59 IST
Last Updated 23 ಏಪ್ರಿಲ್ 2024, 12:59 IST
ಅಕ್ಷರ ಗಾತ್ರ

ನವದೆಹಲಿ: ಪತಂಜಲಿ ಆಯುರ್ವೇದ ಪ್ರಕರಣದಲ್ಲಿ ತನ್ನ ವಿಚಾರಣೆಯ ವ್ಯಾಪ್ತಿಯನ್ನು ಎಲ್ಲ ‘ಫಾಸ್ಟ್‌ ಮೂವಿಂಗ್‌ ಕನ್ಸ್ಯೂಮರ್‌ ಗೂಡ್ಸ್‌’ (ಎಫ್‌ಎಂಸಿಜಿ) ಸಂಸ್ಥೆಗಳಿಗೆ ವಿಸ್ತರಿಸಿರುವುದಾಗಿ ಮಂಗಳವಾರ ಹೇಳಿರುವ ಸುಪ್ರೀಂ ಕೋರ್ಟ್‌, ಈ ಪ್ರಕರಣವನ್ನು ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.

ಸಾರ್ವಜನಿಕರನ್ನು ತಪ್ಪುದಾರಿಗೆಳೆಯುವ ಎಫ್‌ಎಂಸಿಜಿ ಸಂಸ್ಥೆಗಳ ಜಾಹೀರಾತುಗಳ ಬಗ್ಗೆಯೂ ಕಠಿಣ ನಿಲುವು ತೆಗೆದುಕೊಳ್ಳಬೇಕಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿ, ಜನರ ಮೇಲೆ ಸವಾರಿ ಮಾಡುವಂತಹ ಸಂಸ್ಥೆಗಳ ಈ ರೀತಿಯ ಅಭ್ಯಾಸವನ್ನು ನಿಯಂತ್ರಿಸಲು ಕೇಂದ್ರದ ಮೂರು ಸಚಿವಾಲಯಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತಿಳಿಸುವಂತೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರ ಪೀಠ ನಿರ್ದೇಶಿಸಿದೆ.

67 ಪತ್ರಿಕೆಗಳಲ್ಲಿ ಕ್ಷಮೆಯಾಚಿಸಿದ ಬಾಬಾ

ಅಲೋಪಥಿ ಔಷಧಗಳ ಕುರಿತು ಜನರನ್ನು ತಪ್ಪುದಾರಿಗೆಳೆಯುವ ರೀತಿಯ ಜಾಹೀರಾತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮದೇವ ಮತ್ತು ಪತಂಜಲಿ ಆಯುರ್ವೇದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಅವರು 67 ಪತ್ರಿಕೆಗಳಲ್ಲಿ ಪೂರ್ಣ ಮನಸ್ಸಿನಿಂದ ಕ್ಷಮೆ ಯಾಚಿಸಿದ್ದಾರೆ ಮತ್ತು ಈ ಕುರಿತು ಹೆಚ್ಚುವರಿಯಾಗಿ ಜಾಹೀರಾತುಗಳನ್ನು ನೀಡಲು ಸಿದ್ಧರಿದ್ದಾರೆ ಎಂದು ಅವರ ಪರ ಹಿರಿಯ ವಕೀಲ ಮುಕುಲ್‌ ಮುಕುಲ್‌ ರೋಹಟಗಿ ನ್ಯಾಯಾಲಯಕ್ಕೆ ತಿಳಿಸಿದರು. ‌

ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತುಗಳು ದಾಖಲೆಯಲ್ಲಿಲ್ಲ ಎಂದು ಹೇಳಿದ ಪೀಠ, ಅವುಗಳನ್ನು ಎರಡು ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿತು.

ಸೂಕ್ಷ್ಮ ಪರಿಶೀಲನೆ ಅಗತ್ಯ

ಪತಂಜಲಿಯ ವಿಚಾರಣೆ ಸಂದರ್ಭದಲ್ಲಿ ಪೀಠವು, ‘ಔಷಧಗಳು ಮತ್ತು ದಿಢೀರ್ ಪರಿಹಾರ’ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ, ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ, ಗ್ರಾಹಕ ಸಂರಕ್ಷಣಾ ಕಾಯ್ದೆ ಮತ್ತು ಸಂಬಂಧಿತ ನಿಯಮಗಳ ಅನುಷ್ಠಾನಕ್ಕೆ ಸೂಕ್ಷ್ಮವಾದ ಪರಿಶೀಲನೆ ಅತ್ಯಗತ್ಯ ಎಂದು ಹೇಳಿದೆ.

ಈ ಪ್ರಕರಣ ಕೇವಲ ಪತಂಜಲಿಗೆ ಸೀಮಿತವಾಗಿಲ್ಲ. ಅದನ್ನು ಎಲ್ಲ ‘ಫಾಸ್ಟ್‌ ಮೂವಿಂಗ್‌ ಕನ್ಸ್ಯೂಮರ್‌ ಗೂಡ್ಸ್‌’ (ಎಫ್‌ಎಂಸಿಜಿ) ಸಂಸ್ಥೆಗಳಿಗೆ ವಿಸ್ತರಿಸಲಾಗಿದೆ. ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡಿ ಸಾರ್ವಜನಿಕರ ಮೇಲೆ ಸವಾರಿ ಮಾಡುವುದು ಸರಿಯಲ್ಲ’ ಎಂದು ಪೀಠ ತಿಳಿಸಿದೆ.

ಯಾವ ಕ್ರಮ ತೆಗೆದುಕೊಂಡಿದ್ದೀರಿ?

ಗ್ರಾಹಕರ ಕಾನೂನುಗಳ ದುರುಪಯೋಗ ತಡೆಯಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಗಳು ಯಾವ ಕ್ರಮ ಕೈಗೊಂಡಿವೆ ಎಂದು ಪೀಠ ಇದೇ ವೇಳೆ ಪ್ರಶ್ನಿಸಿತು.

ಈ ಸಚಿವಾಲಯಗಳು 2018ರಿಂದ ಸಂಬಂಧಿತ ದತ್ತಾಂಶಗಳ ಜತೆಗೆ, ಈ ಕಾನೂನುಗಳ ದುರುಪಯೋಗ ತಡೆಯಲು ತೆಗೆದುಕೊಂಡ ಕ್ರಮಗಳನ್ನು ವಿವರಿಸುವ ಪ್ರಮಾಣಪತ್ರ ಸಲ್ಲಿಸಬೇಕು. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪರವಾನಗಿ ಪ್ರಾಧಿಕಾರಗಳನ್ನು ಸಹ ಈ ವಿಷಯದಲ್ಲಿ ಸಹ– ಪ್ರತಿವಾದಿಗಳೆಂದು ಸೂಚಿಸಲಾಗುವುದು ಎಂದು ಪೀಠ ತಿಳಿಸಿದೆ.

ಡ್ರಗ್ಸ್‌ ಮತ್ತು ಸೌಂದರ್ಯವರ್ಧಕ ಕಾಯ್ದೆಯ 170ನೇ ನಿಯಮದ ಪ್ರಕಾರ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಆಯುಷ್‌ ಸಚಿವಾಲಯವು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪರವಾನಗಿ ಅಧಿಕಾರಿಗಳು ಮತ್ತು ಆಯುಷ್‌ನ ಔಷಧ ನಿಯಂತ್ರಣ ಇಲಾಖೆಗಳಿಗೆ 2023ರಲ್ಲಿ ಹೊರಡಿಸಿದ್ದ ಪತ್ರದ ಕುರಿತು ವಿವರಣೆ ನೀಡುವಂತೆಯೂ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಕ್ಷಮೆ ಕೋರಲು ತಡವಾದದ್ದೇಕೆ?

ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಕ್ಷಮೆ ಕೋರಲು ಒಂದು ವಾರ ಏಕೆ ಬೇಕಾಯಿತು ಎಂದು ಪೀಠ ಕೇಳಿತು. ಅದಕ್ಕೆ ಪ್ರತಿಕ್ರಿಯಿಸಿದ ವಕೀಲ ಮುಕುಲ್‌ ರೋಹಟಗಿ ‘ಜಾಹೀರಾತಿನ ಭಾಷೆಯನ್ನು ಬಲಿಸಬೇಕಿತ್ತು’ ಎಂದರು. ಇದೇ ವೇಳೆ ಜಾಹೀರಾತುಗಳ ಗಾತ್ರದ ಬಗ್ಗೆಯೂ ನ್ಯಾಯಾಲಯ ಪ್ರಶ್ನೆ ಮಾಡಿತು. ಸಾಮಾನ್ಯವಾಗಿ ನೀವು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವಷ್ಟು ಗಾತ್ರದಲ್ಲಿಯೇ ಇವು ಇದೆಯಾ? ಎಂದು ಪೀಠ ಕೇಳಿತು. ಪತ್ರಿಕೆಗಳಲ್ಲಿ ಪ್ರಕಟವಾದ ನಿಜವಾದ ಜಾಹೀರಾತುಗಳನ್ನು ಪೀಠ ನೋಡಲು ಬಯಸಿದ್ದು ಆ ಕುರಿತ ದಾಖಲೆ ಸಲ್ಲಿಸುವಂತೆ ಆದೇಶಿಸಿತು.

ಭಾರತೀಯ ವೈದ್ಯಕೀಯ ಸಂಘಕ್ಕೂ ಸೂಚನೆ

ಪತಂಜಲಿ ಜಾಹೀರಾತು ಪ್ರಕರಣದ ಅರ್ಜಿದಾರರಾದ ಭಾರತೀಯ ವೈದ್ಯಕೀಯ ಸಂಘಕ್ಕೆ (ಐಎಂಎ) ಪೀಠವು ತಮ್ಮ ಮನೆಯನ್ನೂ ಕ್ರಮಬದ್ಧವಾಗಿ ಇಟ್ಟುಕೊಳ್ಳಿ ಎಂದು ಸೂಚನೆ ನೀಡಿತು.

‘ನೀವು ಪತಂಜಲಿಯತ್ತ ಬೆರಳು ತೋರಿಸುತ್ತಿರುವಾಗ ಉಳಿದ ನಾಲ್ಕು ಬೆರಳುಗಳು ನಿಮ್ಮತ್ತ (ಐಎಂಎ) ತೋರಿಸುತ್ತವೆ’ ಎಂದು ಪೀಠವು ಐಎಂಎ ವಕೀಲರಿಗೆ ಹೇಳಿತು. 

ದುಬಾರಿ ಔಷಧಗಳು ಮತ್ತು ಚಿಕಿತ್ಸೆ ಮಾರ್ಗವನ್ನು ಶಿಫಾರಸು ಮಾಡುವ ಐಎಂಎ ಸದಸ್ಯರ ಆಪಾದಿತ ಅನೈತಿಕ ಕೃತ್ಯಗಳ ಬಗ್ಗೆ ಹಲವು ದೂರುಗಳಿವೆ ಎಂದ ಪೀಠವು ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಪರಿಣಾಮಕಾರಿ ಸಹಾಯಕ್ಕಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು (ಎನ್‌ಎಂಸಿ) ಪ್ರತಿವಾದಿಯನ್ನಾಗಿ ಮಾಡುವಂತೆ ಆದೇಶಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT