ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂಡೆನ್‌ಬರ್ಗ್: ತನಿಖೆ ಸಿಬಿಐಗೆ ಒಪ್ಪಿಸಿ: ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್ ಮನವಿ

ಸೆಬಿ, ಅದಾನಿ ಸಮೂಹ ವಿರುದ್ಧದ ಆರೋಪ: ಕಾಂಗ್ರೆಸ್‌–ಬಿಜೆಪಿ ವಾಕ್ಸಮರ
Published 12 ಆಗಸ್ಟ್ 2024, 15:35 IST
Last Updated 12 ಆಗಸ್ಟ್ 2024, 15:35 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್‌ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಪಕ್ಷ ಸೋಮವಾರ ಆಗ್ರಹಿಸಿದ್ದು, ಅದಾನಿ ಸಮೂಹ ವಿರುದ್ಧದ ಪ್ರಕರಣಗಳ ತನಿಖೆಯನ್ನು ಸಿಬಿಐ ಅಥವಾ ಎಸ್‌ಐಟಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಹಿಂಡೆನ್‌ಬರ್ಗ್‌ ಆರೋಪ ಸೇರಿದಂತೆ ಇಡೀ ಹಗರಣವನ್ನು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆಗೆ ಒ‍ಪ್ಪಿಸಬೇಕು ಎಂಬ ಒತ್ತಾಯವನ್ನು ಪಕ್ಷವು ಪುನರುಚ್ಚರಿಸಿದೆ. ಅದಾನಿ ಸಮೂಹದ ವಿರುದ್ಧ ಕೇಳಿಬಂದಿರುವ ಅರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸೆಬಿ ಹೇಳಿದ ಮರುದಿನ ಕಾಂಗ್ರೆಸ್‌ನಿಂದ ಈ ಒತ್ತಾಯ ಬಂದಿದೆ.

‘ಅದಾನಿ ಸಮೂಹದ ಕೆಲವು ಹಣಕಾಸು ವಹಿವಾಟುಗಳ ಕುರಿತು ನಡೆಯುತ್ತಿರುವ ತನಿಖೆಗಳಿಗೆ ಸಂಬಂಧಿಸಿದಂತೆ ತಾನು ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ತೋರಿಸಲು ಸೆಬಿ ಪ್ರಯತ್ನಿಸಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ದೂರಿದ್ದಾರೆ.

‘ಈ ವಿಷಯಕ್ಕೆ ಸಂಬಂಧಿಸಿದಂತೆ ತಾನು 100 ಸಮನ್ಸ್‌, 1,100 ಪತ್ರಗಳು ಮತ್ತು ಇಮೇಲ್‌ ಹಾಗೂ 12,000 ಪುಟಗಳನ್ನು ಒಳಗೊಂಡ 300 ದಾಖಲೆಗಳನ್ನು ಪರಿಶೀಲಿಸಿರುವುದಾಗಿ ಸೆಬಿ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಆದರೆ ಈ ಕೆಲಸಗಳು ಪ್ರಮುಖ ವಿಷಯದಿಂದ ಗಮನವನ್ನು ಬೇರೆಡೆಗೆ ತಿರುಗುವಂತೆ ಮಾಡುತ್ತದೆ. ಇಲ್ಲಿ ಚಟುವಟಿಕೆ ಮುಖ್ಯವಲ್ಲ. ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದು ಮುಖ್ಯವಾಗುತ್ತದೆ’ ಎಂದಿದ್ದಾರೆ.

‘ಭಾರತದ ಅರ್ಥ ವ್ಯವಸ್ಥೆ ಮೇಲೆ ನಂಬಿಕೆಯಿರುವ ಕೋಟ್ಯಂತರ ಜನರ ಪರವಾಗಿ ಭಾರತದ ಹಣಕಾಸು ಮಾರುಕಟ್ಟೆಗಳ ಮೇಲ್ವಿಚಾರಕನಾಗಿ ಸೆಬಿ ತನ್ನ ಪಾತ್ರವನ್ನು ಜವಾಬ್ದಾರಿಯಿಂದ ನಿರ್ವಹಿಸುವಂತೆ ಒತ್ತಾಯಿಸಿ ನಾನು ಮಂಡಳಿಯ ಅಧ್ಯಕ್ಷರಿಗೆ ಕಳೆದ ವರ್ಷ ಫೆಬ್ರುವರಿ 14 ರಂದು ಪತ್ರ ಬರೆದಿದ್ದೆ. ಆದರೆ ಆ ಪತ್ರಕ್ಕೆ ಇದುವರೆಗೂ ಉತ್ತರ ಲಭಿಸಿಲ್ಲ’ ಎಂದರು.

ಅದಾನಿ ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆಯನ್ನು ಎರಡು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಮಾರ್ಚ್‌ 3ರಂದು ಸೆಬಿಗೆ ನಿರ್ದೇಶಿಸಿತ್ತು ಎಂಬುದನ್ನೂ ಅವರು ನೆನಪಿಸಿದರು.

ತಾನು ಕೈಗೆತ್ತಿಕೊಂಡಿದ್ದ 24 ತನಿಖೆಗಳಲ್ಲಿ ಎರಡು ತನಿಖೆಗಳನ್ನು ಪೂರ್ಣಗೊಳಿಸಿ ಅಂತಿಮ ವರದಿ ನೀಡಲು ಸೆಬಿ ವಿಳಂಬ ಧೋರಣೆ ಅನುಸರಿಸಿದೆ. ಈ ವಿಳಂಬದಿಂದಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ತನ್ನ ಆಪ್ತ ಸ್ನೇಹಿತನ ಅಕ್ರಮ ಚಟುವಟಿಕೆಗಳ ಬಗ್ಗೆ ಯಾವುದೇ ಪ್ರಶ್ನೆ ಎದುರಾಗದ ರೀತಿಯಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಾಧ್ಯವಾಯಿತು ಎಂದು ಆರೋಪಿಸಿದರು.

ರವಿಶಂಕರ್‌ ಪ್ರಸಾದ್ 
ರವಿಶಂಕರ್‌ ಪ್ರಸಾದ್ 

Quote - ಸೆಬಿ ಮೇಲಿನ ವಿಶ್ವಾಸಾರ್ಹತೆ ಮರುಸ್ಥಾಪನೆಯಾಗಬೇಕಾದರೆ ಮಾಧವಿ ಬುಚ್‌ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಜೈರಾಮ್‌ ರಮೇಶ್ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ 

Quote - ನರೇಂದ್ರ ಮೋದಿ ಸರ್ಕಾರವನ್ನು ಉರುಳಿಸಲು ಬಯಸುವ ಜಾರ್ಜ್ ಸೊರೊಸ್‌ ಅವರು ಹಿಂಡೆನ್‌ಬರ್ಗ್‌ನ ಪ್ರಮುಖ ಹೂಡಿಕೆದಾರ ರವಿಶಂಕರ್‌ ಪ್ರಸಾದ್‌ ಬಿಜೆಪಿ ನಾಯಕ

Cut-off box - ‘ಷೇರು ಮಾರುಕಟ್ಟೆ ಕುಸಿತ ಬಯಸಿರುವ ಕಾಂಗ್ರೆಸ್’ ನವದೆಹಲಿ (ಪಿಟಿಐ): ಸೆಬಿ ಅಧ್ಯಕ್ಷರ ವಿರುದ್ಧದ ಹಿಂಡೆನ್‌ಬರ್ಗ್ ಆರೋಪದ ಕುರಿತು ಜೆಪಿಸಿ ತನಿಖೆ ನಡೆಸಬೇಕೆಂಬ ಕಾಂಗ್ರೆಸ್‌ನ ಬೇಡಿಕೆಯನ್ನು ಬಿಜೆಪಿ ಸೋಮವಾರ ತಿರಸ್ಕರಿಸಿದೆ. ‘ಇದು ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸುವ ಮತ್ತು ದೇಶದಲ್ಲಿ ಹೂಡಿಕೆಯನ್ನು ನಾಶಪಡಿಸಲು ಕಾಂಗ್ರೆಸ್‌ ನಡೆಸಿರುವ ಕುತಂತ್ರ’ ಎಂದು ಆರೋಪಿಸಿದೆ.  ‘ಲೋಕಸಭಾ ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟ ನಂತರ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ಹಾಗೂ ಟೂಲ್‌ಕಿಟ್ ಗ್ಯಾಂಗ್‌ನಲ್ಲಿರುವ ಅದರ ಮಿತ್ರರು ಒಟ್ಟಾಗಿ ಭಾರತದಲ್ಲಿ ಆರ್ಥಿಕ ಅರಾಜಕತೆ ಮತ್ತು ಅಸ್ಥಿರತೆಯನ್ನು ಉಂಟುಮಾಡಲು ಪಿತೂರಿ ನಡೆಸಿದ್ದಾರೆ’ ಎಂದು ಬಿಜೆಪಿ ಮುಖಂಡ ಕೇಂದ್ರದ ಮಾಜಿ ಸಚಿವ ರವಿಶಂಕರ್‌ ಪ್ರಸಾದ್ ಸೋಮವಾರ ಟೀಕಿಸಿದರು. ‘ಕಪೋಲಕಲ್ಪಿತ ವರದಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ಜನರಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದೆ. ಆದರೆ ಆ‍ ಪಕ್ಷದ ಪಿತೂರಿಯನ್ನು ಅರ್ಥಮಾಡಿಕೊಂಡಿರುವ ಹೂಡಿಕೆದಾರರು ಮಾರುಕಟ್ಟೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ತಿರಸ್ಕರಿಸಿದ್ದಾರೆ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT