ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Independence Day | ಜಾತ್ಯತೀತ ಸಂಹಿತೆ: ಮೋದಿ ಮಾತಿಗೆ ಕಟುಟೀಕೆ

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಪ್ರತಿಪಾದನೆ: ವಿರೋಧ ಪಕ್ಷಗಳ ಆಕ್ರೋಶ
Published : 15 ಆಗಸ್ಟ್ 2024, 16:18 IST
Last Updated : 15 ಆಗಸ್ಟ್ 2024, 16:18 IST
ಫಾಲೋ ಮಾಡಿ
Comments

ನವದೆಹಲಿ: ದೇಶದಲ್ಲಿ ‘ಜಾತ್ಯತೀತ ನಾಗರಿಕ ಸಂಹಿತೆ’ ಜಾರಿಗೊಳಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ.

‘ಸದ್ಯದ ನಾಗರಿಕ ಸಂಹಿತೆ ‘ಕೋಮುವಾದಿ ಮತ್ತು ತಾರತಮ್ಯ’ ಸ್ವರೂಪದಿಂದ ಕೂಡಿದ್ದು, ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಿದೆ. ಇಂತಹ ಸಂಹಿತೆಯೊಂದಿಗೆ ನಾವು 75 ವರ್ಷ ಜೀವಿಸಿದ್ದೇವೆ. ಆದರೆ, ಜಾತ್ಯತೀತ ನಾಗರಿಕ ಸಂಹಿತೆ ಇಂದಿನ ತುರ್ತು’ ಎಂದು ಹೇಳಿದ್ದಾರೆ.

78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ಮೋದಿ ಅವರು ಪ್ರಸ್ತಾಪಿಸಿರುವ ಈ ವಿಚಾರ ವಿವಾದ ಸೃಷ್ಟಿಸಿದೆ. ವಿರೋಧ ಪಕ್ಷಗಳು ಮೋದಿ ಅವರ ಈ ಹೇಳಿಕೆಯನ್ನು ಖಂಡಿಸಿದ್ದು, ತೀಕ್ಷ್ಣ ಪ್ರತಿಕ್ರಿಯೆ ನೀಡಿವೆ.

‘ಏಕರೂಪ ನಾಗರಿಕ ಸಂಹಿತೆ’ ಜಾರಿ ವಿಚಾರವು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆ. ಪ್ರಣಾಳಿಕೆಯಲ್ಲಿನ ಮತ್ತೊಂದು ಭರವಸೆಯಾದ ‘ಒಂದು ದೇಶ–ಒಂದು ಚುನಾವಣೆ’ ಬಗ್ಗೆಯೂ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಸತತ 11ನೇ ಬಾರಿ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದ ಅವರು, ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಶಿಫಾರಸುಗಳನ್ನು ಒಳಗೊಂಡಿರುವ ಸಂವಿಧಾನದ ನಿರ್ದೇಶಕ ತತ್ವಗಳನ್ನು ಉಲ್ಲೇಖಿಸಿದರು.

98 ನಿಮಿಷಗಳ ಸುದೀರ್ಘ ಭಾಷಣ ಮಾಡಿದ ಅವರು, ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನೂ ಉಲ್ಲೇಖಿಸಿ, ಏಕರೂಪ ನಾಗರಿಕ ಸಂಹಿತೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಕುರಿತ ವಾದಗಳನ್ನು ‘ಕೋಮುವಾದಿ ವಿರುದ್ಧ ಜಾತ್ಯತೀತ’ ಎಂಬ ಮತ್ತೊಂದು ಹಂತಕ್ಕೆ ತಲುಪಿಸಿರುವ ಮೋದಿ, ‘ಈ ವಿಚಾರ ಕುರಿತು ವ್ಯಾಪಕ ಚರ್ಚೆ ನಡೆಸಬೇಕು’ ಎಂದಿದ್ದಾರೆ.

‘ಪ್ರಸಕ್ತ ನಾಗರಿಕ ಸಂಹಿತೆ ಕೋಮುವಾದಿ ಸ್ವರೂಪದ್ದಾಗಿದೆ ಎಂಬುದು ಸಮಾಜದ ದೊಡ್ಡ ವರ್ಗವೊಂದರ ನಂಬಿಕೆ. ಈ ವರ್ಗದ ಅನಿಸಿಕೆಯಲ್ಲಿ ಸತ್ಯವೂ ಇದೆ. ಈ ಸಂಹಿತೆ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತದೆ ಹಾಗೂ ಅಸಮಾನತೆಯನ್ನು ಪ್ರೋತ್ಸಾಯಿಸುತ್ತದೆ’ ಎಂದು ಹೇಳಿದ್ದಾರೆ.

‘ಏಕರೂಪ ನಾಗರಿಕ ಸಂಹಿತೆ ಅನುಷ್ಠಾನ ಸಂವಿಧಾನದ ಆಶಯವೂ ಆಗಿದ್ದು, ಸುಪ್ರೀಂ ಕೋರ್ಟ್‌ ಕೂಡ ಇದರ ಅಗತ್ಯವನ್ನು ಹಲವು ಬಾರಿ ಒತ್ತಿ ಹೇಳಿದೆ. ಇಂತಹ ಸಂಹಿತೆಯನ್ನು ಜಾರಿಗೊಳಿಸುವ ಮೂಲಕ ಸಂವಿಧಾನ ನಿರ್ಮಾತೃಗಳ ಕನಸನ್ನು ನನಸು ಮಾಡಬೇಕಿದೆ’ ಎಂದಿದ್ದಾರೆ.

‘ಅಂಬೇಡ್ಕರ್‌ಗೆ ಅವಮಾನ’

‘ಜಾತ್ಯತೀತ ನಾಗರಿಕ ಸಂಹಿತೆ’ ಜಾರಿಯ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ಇಂಡಿಯಾ’ ಅಂಗಪಕ್ಷಗಳು  ಹಾಗೂ ಇತರ ವಿಪಕ್ಷಗಳು ಗುರುವಾರ ವಾಗ್ದಾಳಿ ನಡೆಸಿವೆ. ‘ಇಂತಹ ಹೇಳಿಕೆ ಮೂಲಕ ಪ್ರಧಾನಿ ಮೋದಿ ಅವರು ಡಾ.ಬಿ.ಆರ್.ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮುದಾಯಗಳ ನಡುವಿನ ಸಾಮರಸ್ಯ ಕೆಡಿಸಲು ಈ ವಿಭಜಕ ತಂತ್ರ ಬಳಸುತ್ತಿದ್ದಾರೆ’ ಎಂದು ‘ಇಂಡಿಯಾ’ದ ಪಕ್ಷಗಳು ಟೀಕಿಸಿವೆ.

‘ಮೋದಿ ನೇತೃತ್ವದ ಸರ್ಕಾರ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ. ಹಿಂಡೆನ್‌ಬರ್ಗ್‌ ವರದಿಯಲ್ಲಿ ಅದಾನಿ ಸಮೂಹ ಕುರಿತು ಎತ್ತಿರುವ ಪ್ರಶ್ನೆಗಳು ಸೇರಿದಂತೆ ಇತರ ವಿಚಾರಗಳನ್ನು ಗಮನಿಸದ ಸರ್ಕಾರ ತನ್ನ ವಿಭಜಕ ಕಾರ್ಯಸೂಚಿಯನ್ನು ಬಳಸುತ್ತಿದೆ’ ಎಂದು ಕಾಂಗ್ರೆಸ್ ಸಿಪಿಎಂ ಸಿಪಿಐ ಹಾಗೂ ಆರ್‌ಜೆಡಿ ಟೀಕಿಸಿವೆ.

ಟೀಕಾ ಪ್ರಹಾರ

ನಾವು ‘ಕೋಮುವಾದಿ ನಾಗರಿಕ ಸಂಹಿತೆ’ ಹೊಂದಿದ್ದೇವೆ ಎಂಬ ಹೇಳಿಕೆ ಡಾ.ಅಂಬೇಡ್ಕರ್‌ ಅವರಿಗೆ ಮಾಡಿದ ಭಾರಿ ಅವಮಾನ. ಅಂಬೇಡ್ಕರ್ ಹಿಂದೂ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ಬಯಸಿದ್ದರು. 1950ರಲ್ಲಿ ಅವರ ಆಶಯ ಈಡೇರಿತ್ತು. ಆದರೆ ಈ ಸುಧಾರಣೆಗಳನ್ನು ಆರ್‌ಎಸ್‌ಎಸ್‌ ಹಾಗೂ ಜನಸಂಘ ಬಲವಾಗಿ ವಿರೋಧಿಸಿದ್ದವು
ಜೈರಾಮ್‌ ರಮೇಶ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ
ಏಕರೂಪ ನಾಗರಿಕ ಸಂಹಿತೆ ಹೆಸರಿನಲ್ಲಿ ಚರ್ಚೆ ಹುಟ್ಟು ಹಾಕುವ ಮೂಲಕ ಸಮಾಜದಲ್ಲಿನ ಸಾಮರಸ್ಯ ಕೆಡಿಸುವುದು ಮೋದಿ ಅವರ ಏಕೈಕ ಗುರಿ. ಈ ಸಂಹಿತೆ ಜಾರಿ ಆರ್‌ಎಸ್‌ಎಸ್‌ನ ಕಾರ್ಯಸೂಚಿಯೂ ಆಗಿದೆ. ಮೋದಿ ಅವರಿಗೆ ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವುದೊಂದೇ ಗೊತ್ತಿದೆ
ಸೀತಾರಾಮ್‌ ಯೆಚೂರಿ ಸಿಪಿಎಂ ಪ್ರಧಾನ ಕಾರ್ಯದರ್ಶಿ
ಇದು ‘ಜಾತ್ಯತೀತ’ ಸಂವಿಧಾನದ ಮೇಲೆ ಬಿಜೆಪಿ ನಡೆಸುತ್ತಿರುವ ದಾಳಿ. ಜನರಿಗೆ ಸ್ಫೂರ್ತಿ ನೀಡುವ ವಿಷಯಗಳು ಮೋದಿ ಅವರಲ್ಲಿ ಇಲ್ಲ. ಹೀಗಾಗಿಯೇ ಅವರು ಕೋಮುವಾದಿ ಕಾರ್ಯಸೂಚಿ ಮೊರೆ ಹೋಗಿದ್ದಾರೆ. ಅವರು ಮಾತನಾಡುವುದೆಲ್ಲ ಆರ್‌ಎಸ್‌ಎಸ್‌ನ ವಿಭಜಕ ಕಾರ್ಯಸೂಚಿಗೆ ಅನುಗುಣವಾಗಿ ಹಾಗೂ ದುರುದ್ದೇಶದಿಂದ ಕೂಡಿರುತ್ತದೆ
ಡಿ.ರಾಜಾ ಸಿಪಿಐ ಪ್ರಧಾನ ಕಾರ್ಯದರ್ಶಿ
ಇತ್ತೀಚಿನ ಚುನಾವಣೆಗಳ ಪ್ರಚಾರ ವೇಳೆ ‘ಮಂಗಳಸೂತ್ರ’ ಹಾಗೂ ಇಸ್ಲಾಂ ಕುರಿತು ಭಯ ಹುಟ್ಟಿಸುವಂತಹ ಹೇಳಿಕೆಗಳನ್ನು ನೀಡಿದ್ದ ಮೋದಿ ಅವರು ಈಗ ‘ಜಾತ್ಯತೀತ ನಾಗರಿಕ ಸಂಹಿತೆ’ ಕುರಿತು ಮಾತನಾಡಿದ್ದಾರೆ. ಜಾತ್ಯತೀತತೆ ಎಂಬುದು ಒಂದು ಪ್ರಕ್ರಿಯೆ ಹಾಗೂ ಅದನ್ನು ಮೈಗೂಡಿಸಿಕೊಳ್ಳಬೇಕು. ತಮ್ಮ ಸಂಕುಚಿತ ಮನೋಭಾವದಿಂದಾಗಿ ಪ್ರತಿ ಬಾರಿಯೂ ಮೋದಿ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸುತ್ತಾರೆ
ಮನೋಜ್‌ ಝಾ ಆರ್‌ಜೆಡಿ ಸಂಸದ

ಮೋದಿ ಹೇಳಿದ್ದೇನು

  • ಜಾತ್ಯತೀತ ನಾಗರಿಕ ಸಂಹಿತೆ ಜಾರಿಯಿಂದ ಧರ್ಮದ ಆಧಾರದಲ್ಲಿ ನಡೆಯುವ ತಾರತಮ್ಯದಿಂದ ಮುಕ್ತರಾಗಬಹುದು

  • ಪದೇಪದೇ ನಡೆಯುವ ಚುನಾವಣೆಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ‘ಒಂದು ದೇಶ–ಒಂದು ಚುನಾವಣೆ’ ಕುರಿತು ಒಮ್ಮತ ಮೂಡಿಸಲು ಸರ್ಕಾರ ಪ್ರಯತ್ನಿಸಲಿದೆ

  • ರಾಜಕೀಯ ಕ್ಷೇತ್ರ ಹೊಸಬರು ಪ್ರವೇಶಿಸಬೇಕು. ಅದರಲ್ಲೂ ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಪದಾರ್ಪಣೆ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT