ಲಖನೌ: ಬೌದ್ಧವಿಹಾರ ನೆಲಸಮಗೊಳಿಸಿದ ಬಳಿಕ ಅನೇಕ ಹಿಂದೂ ದೇವಾಲಯಗಳನ್ನು ನಿರ್ಮಿಸಲಾಗಿದೆ. ಹಾಗಾಗಿ ಪ್ರತಿ ಮಸೀದಿಯಲ್ಲೂ ದೇವಾಲಯ ಹುಡುಕಬೇಡಿ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿಗೆ ಸಲಹೆ ನೀಡಿದ್ದಾರೆ.
‘ಬಿಜೆಪಿಯವರು ಪ್ರತಿ ಮಸೀದಿಯಲ್ಲಿ ದೇವಾಲಯಗಳನ್ನು ಹುಡುಕಿದರೆ, ಬೌದ್ಧರು ಪ್ರತಿ ದೇವಾಲಯದಲ್ಲಿ ವಿಹಾರವನ್ನು ಹುಡುಕುತ್ತಾರೆ. ಬೌದ್ಧವಿಹಾರಗಳನ್ನು ನೆಲಸಮಗೊಳಿಸಿದ ನಂತರ ಈ ಹಿಂದೆ ಅನೇಕ ಹಿಂದೂ ದೇವಾಲಯಗಳನ್ನು ನಿರ್ಮಿಸಲಾಗಿದೆ’ ಎಂದು ಮೌರ್ಯ ಹೇಳಿದ್ದಾರೆ.
ಆದ್ದರಿಂದ, ನಾವು 1947ರಲ್ಲಿದ್ದ ದೇವಾಲಯಗಳು ಮತ್ತು ಮಸೀದಿಗಳ ಸ್ಥಾನಮಾನ ಉಳಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ.
ಬೌದ್ಧ ವಿಹಾರಗಳನ್ನು ನೆಲಸಮಗೊಳಿಸಿದ ನಂತರ ಬದರೀನಾಥ್, ಕೇದಾರನಾಥ ಮತ್ತು ಜಗನ್ನಾಥಪುರಿ ಹಿಂದೂ ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂದು ಕೆಲವು ಪುಸ್ತಕಗಳಲ್ಲಿ ಉಲ್ಲೇಖಗಳಿವೆ ಎಂದು ಅವರು ಹೇಳಿದ್ದಾರೆ.
ಶಾಂತಿ ನೆಲೆಸಲು ಎಲ್ಲರೂ ಸಂವಿಧಾನಕ್ಕೆ ಬದ್ಧರಾಗಿರಬೇಕು ಮತ್ತು ಕೋಮು ದ್ವೇಷ ಪ್ರಚೋದಿಸುವ ಯಾವುದೇ ಪ್ರಯತ್ನವನ್ನು ಖಂಡಿಸಬೇಕು ಎಂದರು.
ಮೌರ್ಯ ಅವರ ಹೇಳಿಕೆ ದುರದೃಷ್ಟಕರ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿದ್ದಾರೆ.
ಮೌರ್ಯ ಈ ಹಿಂದೆ ಹಿಂದೂ ಮಹಾಕಾವ್ಯ ರಾಮ್ ಚರಿತ ಮಾನಸ್ ಅನ್ನು ‘ದಲಿತ ವಿರೋಧಿ’ ಎಂದು ಹೇಳಿ ನಿಷೇಧಿಸುವಂತೆ ಒತ್ತಾಯಿಸಿದ್ದರು.