ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಸೋಲುವ ಭೀತಿ, ಮತಕ್ಕಾಗಿ ನಕ್ಸಲರ ಪರ ಕಾಂಗ್ರೆಸ್‌ ವಕಾಲತ್ತು: BJP

Published 18 ಏಪ್ರಿಲ್ 2024, 11:31 IST
Last Updated 18 ಏಪ್ರಿಲ್ 2024, 11:31 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸುವ ಭೀತಿಯಲ್ಲಿರುವ ಕಾಂಗ್ರೆಸ್‌ ಮತಕ್ಕಾಗಿ ನಕ್ಸಲರ ಪರ ವಕಾಲತ್ತು ವಹಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನವಾಲಾ, ‘ಛತ್ತೀಸ್‌ಗಢದಲ್ಲಿ ಭದ್ರತಾ ಪಡೆ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ ನಕ್ಸಲರನ್ನು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾಟೆ ಹುತಾತ್ಮರು ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಉಗ್ರರ ವಿರುದ್ಧ ಭದ್ರತಾ ಪಡೆ ಕೈಗೊಂಡ ಕ್ರಮವನ್ನು ಪ್ರಶ್ನಿಸಿದ್ದಾರೆ’ ಎಂದು ಹೇಳಿದ್ದಾರೆ.

ಮಂಗಳವಾರ ಛತ್ತೀಸಗಢದ ಕಾಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ 29 ಮಂದಿ ನಕ್ಸಲರು ಹತ್ಯೆಯಾಗಿದ್ದರು. ಇದು ರಾಜ್ಯದಲ್ಲಿಯೇ ನಡೆದ ಅತಿದೊಡ್ಡ ಎನ್‌ಕೌಂಟರ್‌ ಆಗಿದೆ.

‘ಭದ್ರತಾ ಪಡೆಗಳ ಕ್ರಮವನ್ನು ಸ್ವಾಗತಿಸುವ ಬದಲು, ಕಾಂಗ್ರೆಸ್‌ ನಾವು ನಿರೀಕ್ಷಿಸಿದ್ದನ್ನೇ ಮಾಡಿದೆ. ನಕ್ಸಲರನ್ನು ಹುತಾತ್ಮರು ಎಂದು ಹೇಳಿರುವುದು ಯೋಚಿಸಲೂ ಸಾಧ್ಯವಿಲ್ಲ’ ಎಂದು ಪೂನವಾಲಾ ಕಿಡಿಕಾರಿದ್ದಾರೆ.

‘ಸುಪ್ರಿಯಾ ಅವರು ನಕ್ಸಲರನ್ನು ಹುತಾತ್ಮರೆಂದು ಬಣ್ಣಸಿದ್ದು, ಅವರ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಕಾರ್ಯಾಚರಣೆ ಕುರಿತು ಸಂಪೂರ್ಣ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಈ ಮೂಲಕ ‘ಇಂಡಿಯಾ’ ಮೈತ್ರಿಕೂಟದ ನೈಜ ಮುಖವನ್ನು ಅವರು ತೆರೆದಿಟ್ಟಿದ್ದಾರೆ’ ಎಂದು ಪೂನವಾಲಾ ತಿಳಿಸಿದ್ದಾರೆ.

‘ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರು ಸೋಲುವ ಭೀತಿಯಲ್ಲಿದ್ದು, ನಕ್ಸಲರ ಪರ ವಕಾಲತ್ತು ವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಕಾಂಗ್ರೆಸ್‌ ನಕ್ಸಲರ ಪರ ನಿಲ್ಲಲ್ಲು ಹಿಂಜರಿಯುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT