ದತಿಯಾ: ಭಾರಿ ಮಳೆಗೆ ಮನೆ ಸಮೀಪದ ಹಳೆ ಗೋಡೆಯೊಂದು ಕುಸಿದು ಬಿದ್ದು ಏಳು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ ದತಿಯಾ ಜಿಲ್ಲೆಯಲ್ಲಿ ನಡೆದಿದೆ.
ಖಾಲ್ಕಾಪುರ ಪ್ರದೇಶದಲ್ಲಿ ಮುಂಜಾನೆ 4 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಹಳೆ ಗೋಡೆಯೊಂದು ಕುಸಿದು ಬಿದ್ದು ಮಣ್ಣಿನಡಿ 9 ಮಂದಿ ಸಿಲುಕಿಕೊಂಡಿದ್ದರು. ತಕ್ಷಣಕ್ಕೆ ಸ್ಥಳಾಗಮಿಸಿದ ರಕ್ಷಣಾ ತಂಡ, ಇಬ್ಬರನ್ನು ರಕ್ಷಿಸಿ ಹೊರತೆಗೆದಿತ್ತು. ಉಳಿದ ಏಳು ಮಂದಿ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ’ ಎಂದು ಜಿಲ್ಲಾಧಿಕಾರಿ ಸಂದೀಪ್ ಮಕಿನ್ ಹೇಳಿದ್ದಾರೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಮೃತರ ಕುಟುಂಬಕ್ಕೆ ತಲಾ ₹4 ಲಕ್ಷ ಪರಿಹಾರ ಘೋಷಿಸಿದ್ದಾರೆ.