ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುರೈ: ಪೊಂಗಲ್‌ ಹಿನ್ನೆಲೆ ಆಯೋಜಿಸಿದ್ದ ಜಲ್ಲಿಕಟ್ಟು ಪಂದ್ಯದಲ್ಲಿ 42 ಮಂದಿಗೆ ಗಾಯ

Published 16 ಜನವರಿ 2024, 14:25 IST
Last Updated 16 ಜನವರಿ 2024, 14:25 IST
ಅಕ್ಷರ ಗಾತ್ರ

ಮದುರೈ: ಪಾಲಮೇಡುವಿನಲ್ಲಿ ಮಂಗಳವಾರ ಪೊಂಗಲ್‌ ಪ್ರಯುಕ್ತ ನಡೆದ ಜಲ್ಲಿಕಟ್ಟು ಕ್ರೀಡೆಯ ಎರಡನೇ ಸ್ಪರ್ಧೆಯಲ್ಲಿ ಹೋರಿಗಳು ತಿವಿದು 16 ಮಂದಿ ಪ್ರೇಕ್ಷಕರು, 14 ಮಂದಿ ಹೋರಿ ಪಳಗಿಸುವವರು ಸೇರಿದಂತೆ 42 ಮಂದಿ ಗಾಯಗೊಂಡಿದ್ದಾರೆ.

ಪೊಂಗಲ್ (ಸುಗ್ಗಿ) ಹಬ್ಬದ ಸಂದರ್ಭದಲ್ಲಿ ವಾರ್ಷಿಕವಾಗಿ ಜಲ್ಲಿಕಟ್ಟು ಆಯೋಜಿಸುವ ಪಾಲಮೇಡುವಿನಲ್ಲಿ ನಡೆದ ಹೋರಿಗಳನ್ನು ಪಳಗಿಸುವ (ಏರು ತಝುವುತಾಲ್) ಕಾರ್ಯಕ್ರಮದಲ್ಲಿ ಗಾಯಗೊಂಡ 42 ಮಂದಿಯಲ್ಲಿ ಹನ್ನೆರಡು ಮಂದಿ ಹೋರಿ ಮಾಲೀಕರೂ ಸೇರಿದ್ದಾರೆ.

14 ಹೋರಿಗಳನ್ನು ಹಿಡಿದು ಪಳಗಿಸಿದ ಮದುರೈನ ಪಿ. ಪ್ರಭಾಕರನ್‌ ಅವರ ಶೌರ್ಯಕ್ಕೆ ಪ್ರಥಮ ಬಹುಮಾನವಾಗಿ ಮುಖ್ಯಮಂತ್ರಿ ಪ್ರಶಸ್ತಿಯ ಕಾರು ನೀಡಿ ಗೌರವಿಸಲಾಯಿತು.

‘ಕಳೆದ ಮೂರು ವರ್ಷಗಳಿಂದ ಸತತವಾಗಿ ನಾನು ಜಲ್ಲಿಕಟ್ಟು ಗೆದ್ದಿದ್ದೇನೆ. ತುಂಬಾ ಸಂತೋಷವಾಗಿದೆ. ನಾನು ಶೀಘ್ರವೇ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರನ್ನು ಭೇಟಿ ಮಾಡುತ್ತೇನೆ’ ಎಂದು ಪ್ರಭಾಕರ್‌ ಸುದ್ದಿಗಾರರಿಗೆ ತಿಳಿಸಿದರು.

11 ಹೋರಿಗಳನ್ನು ಪಳಗಿಸಿದ ಚಿನ್ನಪಟ್ಟಿ ತಮಿಳರಸನ್ ಅವರಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಅವರಿಗೆ ಮೋಟರ್‌ ಬೈಕ್‌ ನೀಡಿ ಗೌರವಿಸಲಾಯಿತು. 

2023ರ ಪೊಂಗಲ್ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದ ತಮಿಳರಸನ್‌, ‘ಈ ಬಾರಿ ಉತ್ತಮ ಹೋರಿಗಳು ಅಖಾಡಕ್ಕೆ ಇಳಿಸಿದ್ದರಿಂದ ಅವುಗಳನ್ನು ಪಳಗಿಸುವುದು ಕಷ್ಟವಾಯಿತು’ ಎಂದು ಹೇಳಿದರು. 8 ಹೋರಿಗಳನ್ನು ಪಳಗಿಸಿದ ಪಾಂಡೀಶ್ವರನ್ ಅವರಿಗೆ ತೃತೀಯ ಸ್ಥಾನ ಲಭಿಸಿತು. 

ಪುದುಕೊಟ್ಟೈ ಜಿಲ್ಲೆಯ ಚಿನ್ನಕರುಪ್ಪು ಎಂಬವರಿಗೆ ಸೇರಿದ ಹೋರಿ ಯಾರ ಹಿಡಿತಕ್ಕೂ ಸಿಗದೆ ನುಣುಚಿಕೊಂಡು, ಮುಖ್ಯಮಂತ್ರಿ ಪ್ರಶಸ್ತಿಗೆ ಭಾಜನವಾಯಿತು. ಈ ಹೋರಿಯ ಮಾಲೀಕರಿಗೆ ರಾಜ್ಯ ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರು ಕಾರು ನೀಡಿ ಗೌರವಿಸಿದರು. ಥೇಣಿ ಜಿಲ್ಲೆಯ ಮತ್ತೊಬ್ಬ ಹೋರಿ ಮಾಲೀಕ ಅಮರನಾಥ್ ಅವರಿಗೆ ಹಸುವನ್ನು ನೀಡಲಾಯಿತು.

ವಾಡಿವಾಸಲ್‌ನಿಂದ (ಹೋರಿಗಳನ್ನು ಅಖಾಡಕ್ಕೆ ಬಿಡುವ ಪ್ರವೇಶ ಬಿಂದು) ಒಟ್ಟು 840 ಹೋರಿಗಳನ್ನು ಜಲ್ಲಿಕಟ್ಟು ಅಂಗಳಕ್ಕೆ ಬಿಡಲಾಯಿತು. ಸುಮಾರು 1,000 ಮಂದಿ ಹೋರಿ ಪಳಗಿಸುವವರು ಕ್ರೀಡೆಯಲ್ಲಿ ಭಾಗವಹಿಸಿದ್ದರು. 

ಹೋರಿಗಳನ್ನು ಹಿಡಿಯಲು ಯುವಕರು ಅಂಗಳದಲ್ಲಿ ಯತ್ನಿಸುತ್ತಿದ್ದಾಗ ಆ ಹೋರಿಗಳು ತಪ್ಪಿಸಿಕೊಂಡು, ಹಿಡಿಯಬಂದವರನ್ನು ಕೊಂಬಿನಲ್ಲಿ ತಿವಿದು, ಚಿಮ್ಮಿಕೊಂಡು ಓಡುತ್ತಿದ್ದಾಗ, ಕೆಲವು ಹೋರಿಗಳನ್ನು ಹಿಡಿದು ಪಳಗಿಸಿದಾಗ ಪ್ರೇಕ್ಷಕರ ಕೇಕೆ, ಹರ್ಷೋದ್ಗಾರ ಮುಗಿಲುಮುಟ್ಟಿತ್ತು. 

ಜಿಲ್ಲೆಯ ಅವನಿಯಪುರಂನಲ್ಲಿ ಸೋಮವಾರ ಜಲ್ಲಿಕಟ್ಟು ಕ್ರೀಡೆಯ ಮೊದಲ ಸ್ಪರ್ಧೆ ನಡೆದಿತ್ತು. ಬುಧವಾರದ ಅಂತಿಮ ಸ್ಪರ್ಧೆಗೆ (ಗ್ರ್ಯಾಂಡ್‌ ಫಿನಾಲೆ) ಅಲಂಗನಲ್ಲೂರು ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT