ಕೋಲ್ಕತ್ತ: ಕೋಲ್ಕತ್ತದಲ್ಲಿ ಸೆ.14 ರಂದು ನಡೆಯಬೇಕಿದ್ದ ತಮ್ಮ ಸಂಗೀತ ಕಾರ್ಯಕ್ರಮವನ್ನು ಶ್ರೇಯಾ ಘೋಷಾಲ್ ಮುಂದೂಡಿದ್ದಾರೆ. ಆರ್.ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಿಂದ ಬಹಳ ನೋವುಂಟಾಗಿದೆ ಹೀಗಾಗಿ ಸಂಗೀತ ಸಂಜೆಯನ್ನು ಮುಂದೂಡುವುದಾಗಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಇತ್ತೀಚೆಗೆ ಕೋಲ್ಕತ್ತದಲ್ಲಿ ನಡೆದ ಭೀಕರ ಮತ್ತು ಹೇಯ ಘಟನೆ ನನ್ನ ಮೇಲೆ ಆಳವಾದ ಪರಿಣಾಮ ಬೀರಿದೆ. ನಾನೇ ಒಬ್ಬ ಮಹಿಳೆಯಾಗಿ, ಅವಳು ಅನುಭವಿಸಿದ ಕ್ರೂರತೆಯ ಬಗ್ಗೆ ಯೋಚಿಸಲಾಗದು. ಆ ವಿಚಾರ ನೆನೆದರೆ ಬೆನ್ನು ಮೂಳೆಯಿಂದ ನಡುಕ ಹುಟ್ಟುತ್ತದೆ. ಇಂತಹ ನೋವಿನ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಸಲು ಸಾಧ್ಯವಾಗದು. ಅಕ್ಟೋಬರ್‌ನಲ್ಲಿ ನಡೆಸಲು ಬಯಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
ಸೆ.14 ರಂದು ಶ್ರೇಯಾ ಘೋಷಾಲ್ ಸಂಗೀತ ಕಾರ್ಯಕ್ರಮ ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿತ್ತು. ಕಾರ್ಯಕ್ರಮವನ್ನು ಅಕ್ಟೋಬರ್‌ನಲ್ಲಿ ಮರು ನಿಗದಿಪಡಿಸುವ ನಿರೀಕ್ಷೆಯಿದೆ. ಟಿಕೆಟ್‌ಗಳ ಆರಂಭದ ಬೆಲೆ ₹1,749 ಆಗಿದೆ. ಸಂಘಟಕರು ತಮ್ಮ ವೆಬ್‌ಸೈಟ್‌ನಲ್ಲಿ, ‘ಈ ಕಾರ್ಯಕ್ರಮವನ್ನು ಮರುನಿಗದಿಗೊಳಿಸಲಾಗಿದೆ. ಹೊಸ ನವೀಕರಣಗಳಿಗಾಗಿ ಈ ಸೈಟ್ ವೀಕ್ಷಿಸಿ’ ಎಂದು ಹೇಳಿದ್ದಾರೆ.