ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ಕಾಂಗ್ರೆಸ್‌ ತೊರೆದ ಘಟಾನುಘಟಿ ನಾಯಕರು: ಸಿಬಲ್, ಆಜಾದ್, ಸಿಂಧಿಯಾ ಹೀಗೆ...
ಕಾಂಗ್ರೆಸ್‌ ತೊರೆದ ಘಟಾನುಘಟಿ ನಾಯಕರು: ಸಿಬಲ್, ಆಜಾದ್, ಸಿಂಧಿಯಾ ಹೀಗೆ...
Published 14 ಜನವರಿ 2024, 12:48 IST
Last Updated 14 ಜನವರಿ 2024, 12:48 IST
ಅಕ್ಷರ ಗಾತ್ರ

ನವದೆಹಲಿ: 2019ರಿಂದ ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಪಕ್ಷ ತೊರೆಯುತ್ತಿದ್ದಾರೆ. ಇದೀಗ ಮಾಜಿ ಸಂಸದ ಮಿಲಿಂದ್ ದಿಯೋರಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ 10ಕ್ಕೂ ಹೆಚ್ಚು ಪ್ರಮುಖ ನಾಯಕರು ಕಾಂಗ್ರೆಸ್‌ ತೊರೆದಿದ್ದಾರೆ. ಇವರೆಲ್ಲಾ ಗಾಂಧಿ ಕುಟುಂಬಕ್ಕೆ ಆಪ್ತರಾದವರು ಎಂಬುದು ಮುಖ್ಯವಾಗಿದೆ. 

2019ರಿಂದ ಕಾಂಗ್ರೆಸ್‌ ತೊರೆದ ಪ್ರಮುಖ ನಾಯಕರ ವಿವರ ಇಲ್ಲಿದೆ.  

ಮಿಲಿಂದ್ ದಿಯೋರಾ

ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ಮಿಲಿಂದ್ ದಿಯೋರಾ ಇಂದು ( ಜ.14) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಸ್ಥಾನಮಾನಗಳು ಸಿಗುತ್ತಿಲ್ಲ ಎಂದು  ಕಾಂಗ್ರೆಸ್ ಜೊತೆಗೆ ಮುನಿಸಿಕೊಂಡು ರಾಜೀನಾಮೆ ನೀಡಿದ್ದಾರೆ. 

ಕಾಂಗ್ರೆಸ್‌ ಜೊತೆಗಿನ ನನ್ನ ಕುಟುಂಬದ 55 ವರ್ಷಗಳ ಬಾಂಧವ್ಯವನ್ನು ಕೊನೆಗೊಳಿಸಿದ್ದೇನೆ ಎಂದು ಹೇಳಿರುವ ಅವರು ಸಿ.ಎಂ ಏಕನಾಥ ಶಿಂದೆ ನೇತೃತ್ವದ ಶಿವಸೇನಾಗೆ ಸೇರಿದ್ದಾರೆ.

ಕಪಿಲ್ ಸಿಬಲ್...

ಉತ್ತರಪ್ರದೇಶ ರಾಜ್ಯದವರಾದ ಕಪಿಲ್‌ ಸಿಬಲ್‌ ಅವರು 2022ರ ಮೇ 16ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಅವರು ಯಾವುದೇ ಪಕ್ಷಕ್ಕೂ ಸೇರಿಲ್ಲ. ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸಿಬಲ್‌ ರಾಜ್ಯಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. 

ಸಿಬಲ್‌ ಅವರು ಕಾಂಗ್ರೆಸ್‌ನಲ್ಲಿ ಇದ್ದಾಗ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದರು. ಸುಪ್ರೀಂಕೋರ್ಟ್‌ ವಕೀಲರು ಆಗಿರುವ ಅವರು ಈ ಹಿಂದೆ ಪಕ್ಷದ ಪರವಾಗಿ ಅನೇಕ ಸಲ ವಾದ ಮಂಡನೆ ಮಾಡಿದ್ದರು.

ಗುಲಾಮ್ ನಬಿ ಆಜಾದ್

ಜಮ್ಮು ಮತ್ತು ಕಾಶ್ಮೀರದ ಗುಲಾಮ್ ನಬಿ ಆಜಾದ್ ಅವರು 2022ರಲ್ಲಿ ಕಾಂಗ್ರೆಸ್‌ ತೊರೆದರು. ರಾಜ್ಯಸಭೆಗೆ ನೇಮಕ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ  ಪರಿಗಣಿಸಲಿಲ್ಲ ಎಂದು ಮುನಿಸಿಕೊಂಡು ಅವರು ಪಕ್ಷವನ್ನು ತೊರೆದರು. ಕಾಂಗ್ರೆಸ್‌ನಲ್ಲಿ ಇದ್ದಾಗ ಅವರು ಕೇಂದ್ರ ಸಚಿವರಾಗಿ ಹಲವು ಬಾರಿ ಕೆಲಸ ಮಾಡಿದ್ದರು. ಸದ್ಯ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಪಿಎಪಿ ಪಕ್ಷವನ್ನು ಸ್ಥಾಪಿಸಿದ್ದಾರೆ. 

ಕಾಂಗ್ರೆಸ್ ಪಕ್ಷದ ನಾಯಕತ್ವದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ಜಿ23 ಗುಂಪಿನಲ್ಲಿ ಇವರು ಗುರುತಿಸಿಕೊಂಡಿದ್ದರು. ರಾಹುಲ್ ಗಾಂಧಿ ಅವರನ್ನು ಅಪ್ರಬುದ್ಧ ನಾಯಕ ಎಂದು ಕರೆದಿದ್ದರು.

ಹಾರ್ದಿಕ್ ಪಟೇಲ್

ಗುಜರಾತ್‌ ರಾಜ್ಯದ ಹಾರ್ದಿಕ್ ಪಟೇಲ್ 2022ರ ಮೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದರು. ಪಾಟಿದಾರ್ ಸಮುದಾಯದ ಪ್ರಬಲ ಯುವ ನಾಯಕ ಎಂದೇ ಗುರುತಿಸಿಕೊಂಡಿದ್ದ ಹಾರ್ದಿಕ್‌ ಪಟೇಲ್‌ 2019ರಲ್ಲಿ ಕಾಂಗ್ರೆಸ್‌ ಸೇರಿದ್ದರು. ಗುಜರಾತ್‌ ಕಾಂಗ್ರೆಸ್ ನಾಯಕರ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಅವರು ಪಕ್ಷ ತೊರೆದು ಸದ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.  

ಅಶ್ವನಿ ಕುಮಾರ್

ಉತ್ತರಪ್ರದೇಶದ ಅಶ್ವನಿ ಕುಮಾರ್ 2022ರ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು. 2019ರ ಲೋಕಸಭೆ ಹಾಗೂ ಹಲವು ವಿಧಾನಸಭೆ ಚುನಾವಣೆಗಳಲ್ಲಿ ಸಂಘಟನೆಯ ಕೊರತೆಯಿಂದ ಕಾಂಗ್ರೆಸ್‌ ಸೋಲಿಗೆ ಕಾರಣ ಎಂದು ಹೇಳಿದ್ದರು. ನಂತರ ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ಅವರು ಧ್ವನಿ ಎತ್ತಿ ಪಕ್ಷ ತೊರೆದರು. 

ಸುನೀಲ್ ಜಾಖಡ್‌...

ಪಂಜಾಬ್‌ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಸುನೀಲ್‌ ಜಾಖಡ್‌ ಅವರು 2022ರಲ್ಲಿ ಕಾಂಗ್ರೆಸ್‌ನಿಂದ ಹೊರ ಬಂದರು. ಪಂಜಾಬ್‌ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಅವರು ಬಂಡೆದ್ದು ಹೊರಬಂದರು. 

ಜಾಖಡ್‌ ಅವರು ಬಿಜೆಪಿಯಲ್ಲಿದ್ದು ಸದ್ಯ ಪಂಜಾಬ್‌ ಬಿಜೆಪಿ ಅಧ್ಯಕ್ಷರಾಗಿದ್ದಾರೆ. 2024ರ ಲೋಕಸಭೆ ಚುನಾವಣೆಯ ರಾಜ್ಯ ಉಸ್ತುವಾರಿಯನ್ನು ಹೊತ್ತಿದ್ದಾರೆ.   

ಆರ್‌ಪಿಎನ್ ಸಿಂಗ್

ಉತ್ತರಪ್ರದೇಶ ರಾಜ್ಯದವರಾದ ಆರ್‌ಪಿಎನ್ ಸಿಂಗ್ 2022ರಲ್ಲಿ ಕಾಂಗ್ರೆಸ್‌ ತೊರೆದರು. ಹಿಂದುಳಿದ ವರ್ಗಗಳ ಪ್ರಮುಖ ನಾಯಕ ಎಂದು ಅವರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ಪ್ರಿಯಾಂಕಾ ಗಾಂಧಿ ತಮ್ಮನ್ನು ನಿರ್ಲಕ್ಷಿಸಿದರು ಎಂಬ ಕಾರಣಕ್ಕೆ ಅವರು ಪಕ್ಷದಿಂದ ಹೊರಬಂದರು.

ಸದ್ಯ ಅವರು ಬಿಜೆಪಿ ಸೇರಿದ್ದಾರೆ. ಉತ್ತರಪ್ರದೇಶ ಬಿಜೆಪಿಯಲ್ಲಿ ಪಕ್ಷದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿ ಅವರಿಗೆ ಬಿಜೆಪಿ ಲೋಕಸಭೆ ಚುನಾವಣೆ ಟಿಕೇಟ್‌ ನೀಡಲಿದೆ.  

ಜ್ಯೋತಿರಾಧಿತ್ಯ ಸಿಂಧಿಯಾ

ರಾಹುಲ್ ಗಾಂಧಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ, ಮಧ್ಯಪ್ರದೇಶದ ಜ್ಯೋತಿರಾಧಿತ್ಯ ಸಿಂಧಿಯಾ 2020ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಅಷ್ಟೇ ಅಲ್ಲ ತಮ್ಮೊಂದಿಗೆ 20ಕ್ಕೂ ಅಧಿಕ ಕಾಂಗ್ರೆಸ್‌ ಶಾಸಕರನ್ನು ಕರೆದುಕೊಂಡ ಬಂದು, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದರು. 

ಜ್ಯೋತಿರಾಧಿತ್ಯ ಸಿಂಧಿಯಾ ಅವರು ಕೇಂದ್ರ ಸಚಿವರಾಗಿದ್ದಾರೆ. ಇವರು ಮಾಧವರಾವ್ ಸಿಂಧಿಯಾ ಅವರ ಪುತ್ರ.

ಜಿತಿನ್ ಪ್ರಸಾದ್

ಉತ್ತರಪ್ರದೇಶ ಕಾಂಗ್ರೆಸ್‌ನ ಬ್ರಾಹ್ಮಣ ಸಮುದಾಯದ ಪ್ರಮುಖ ನಾಯಕರಾಗಿದ್ದ ಜಿತಿನ್ ಪ್ರಸಾದ್ 2021ರಲ್ಲಿ ಕಾಂಗ್ರೆಸ್ ತೊರೆದರು. ಪಕ್ಷದಲ್ಲಿ ಸ್ಥಾನಮಾನ ನೀಡಲಿಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ ತೊರೆದರು. ಬಿಜೆಪಿ ಸೇರಿರುವ ಅವರು ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. 

ಅಲ್ಫೇಶ್ ಠಾಕೂರ್

ಗುಜರಾತ್‌ ರಾಜ್ಯದ ಕಾಂಗ್ರೆಸ್‌ ಮುಖಂಡ ಅಲ್ಫೇಶ್ ಠಾಕೂರ್ 2019ರಲ್ಲಿ ಪಕ್ಷವನ್ನು ತೊರೆದರು. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದರು. ಇದರಿಂದ ಕಾಂಗ್ರೆಸ್‌ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಬಿಜೆಪಿ ಸೇರಿದ್ದರು. ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಅವರು ಗಾಂಧಿನಗರದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. 

ಅನಿಲ್ ಆ್ಯಂಟನಿ

ಕಾಂಗ್ರೆಸ್‌ನ ಹಿರಿಯ ನಾಯಕ ಎಕೆ ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ 2023ರ ಜನವರಿಯಲ್ಲಿ ಕಾಂಗ್ರೆಸ್ ತೊರೆದರು. ಪ್ರಧಾನಿ ಮೋದಿ ಅವರನ್ನು ಅನಿಲ್ ಆ್ಯಂಟನಿ ಶ್ಲಾಘಿಸಿದ್ದರು. ನಂತರದ ದಿನಗಳಲ್ಲಿ ಬಿಜೆಪಿ ಸೇರಿದ್ದರು. ಸದ್ಯ ಅವರು ಕೇರಳ ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT