ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ನೇ ವರ್ಷ ಪ್ರಧಾನಿ ಭಾಷಣ: ಶ್ರಮಿಕರು ಸೇರಿ 1,800 ‘ವಿಶೇಷ ಅತಿಥಿ’ಗಳು

Published 15 ಆಗಸ್ಟ್ 2023, 15:30 IST
Last Updated 15 ಆಗಸ್ಟ್ 2023, 15:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಸತತ 10ನೇ ವರ್ಷ, ಸ್ವಾತಂತ್ರ್ಯೋತ್ಸವ ನಿಮಿತ್ತ ಮಂಗಳವಾರ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಭಾಷಣ ಮಾಡಿದರು.

* ರಾಜಸ್ಥಾನಿ ಭಾಂದನಿ ಮುದ್ರಣವಿದ್ದ ಬಹುವರ್ಣದ ರುಮಾಲು, ಬಿಳಿ ಬಣ್ಣದ ಪೂರ್ಣತೋಳಿನ ಕುರ್ತಾ, ಪೈಜಾಮ, ವಿ–ನೆಕ್‌ ವಿನ್ಯಾಸದ ಜಾಕೆಟ್‌ ಧರಿಸಿ ಗಮನಸೆಳೆದರು.  

* ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್‌ ಭಟ್, ರಕ್ಷಣಾ ಕಾರ್ಯದರ್ಶಿ ಗಿರಿಧರ್‌ ಅರಮನೆ ಪ್ರಧಾನಿ ಅವರನ್ನು ಬರಮಾಡಿಕೊಂಡರು. ಕಾರ್ಯದರ್ಶಿಯವರು ಜನರಲ್‌ ಆಫೀಸರ್ ಕಮ್ಯಾಂಡಿಂಗ್‌ (ಜಿಒಸಿ) ದೆಹಲಿ, ಲೆಫ್ಟಿನಂಟ್‌ ಧೀರಜ್‌ ಸೇಠ್ ಅವರನ್ನು ಪ್ರಧಾನಿಗೆ ಪರಿಚಯಿಸಿದರು.

* ಜಿಒಸಿ ಜೊತೆಗೂಡಿ ತೆರಳಿದ ಪ್ರಧಾನಿ ಪಥಸಂಚಲನ ವೀಕ್ಷಿಸಿ ವಂದನೆ ಸ್ವೀಕರಿಸಿದ ನಂತರ, 17ನೇ ಶತಮಾನದ ಮೊಘಲರ ಸ್ಮಾರಕ ಕೆಂಪುಕೋಟೆಯಲ್ಲಿ ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ ಮಾಡಿದರು. ಸೇನೆಯ ಅಧಿಕಾರಿಗಳಾದ ಮೇಜರ್‌ ನಿಖಿತಾ ನಾಯರ್ ಮತ್ತು ಜಾಸ್ಮೀನ್‌ ಕೌರ್ ಧ್ವಜಾರೋಹಣಕ್ಕೆ ನೆರವಾದರು.

* ಪೊಲೀಸ್ ಬ್ಯಾಂಡ್‌ನವರು ರಾಷ್ಟ್ರಗೀತೆ ನುಡಿಸುತ್ತಿದ್ದಂತೆ, 21 ಕುಶಾಲತೋಪುಗಳನ್ನು ಸಿಡಿಸಲಾಯಿತು. ಇದೇ ಮೊದಲ ಬಾರಿಗೆ ಧ್ವಜವಂದನೆ ಕಾರ್ಯಕ್ಕೆ ದೇಶಿ ತಯಾರಿಕೆಯ 105 ಎಂ.ಎಂನ ಲೈಟ್ ಫೀಲ್ಡ್ ಗನ್ ಬಳಸಲಾಯಿತು. 

* ವಾಯುಪಡೆಯ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಟಿ ಮಾಡಿದ್ದು, ಸಭಿಕರು ಚಪ್ಪಾಳೆ ಮೂಲಕ ಇದಕ್ಕೆ ಮೆಚ್ಚುಗೆ ಸೂಚಿಸಿದರು. ಪ್ರಧಾನಿ 90 ನಿಮಿಷ ಮಾತನಾಡಿದರು. ಸತತ 10ನೇ ವರ್ಷವೂ ಅವರು ಬುಲೆಟ್‌ ಫ್ರೂಫ್‌ನ ಗಾಜಿನ ಕವಚದ ಬದಲಿಗೆ ಮುಕ್ತ ಪೋಡಿಯಂ ಬಳಸಿ ಭಾಷಣ ಮಾಡಿದರು.

* ವಿವಿಧೆಡೆಯಿಂದ 1,800 ಪ್ರಮುಖರನ್ನು ‘ವಿಶೇಷ ಅತಿಥಿ’ಗಳಾಗಿ ಆಹ್ವಾನಿಸಲಾಗಿತ್ತು. ಇವರಲ್ಲಿ ಗ್ರಾಮಗಳ ಸರಪಂಚರು, ಮೀನುಗಾರರು, ಶುಶ್ರೂಷಕಿಯರು, ಸೆಂಟ್ರಲ್‌ ವಿಸ್ತಾದ ನಿರ್ಮಾಣ ಕಾರ್ಮಿಕರು ಸೇರಿದ್ದರು.

* ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ಆಹ್ವಾನಿಸಲಾಗಿದ್ದ 75 ಜೋಡಿಗಳು ಸಾಂಪ್ರದಾಯಿಕ ಉಡುಗೆಗಳಲ್ಲಿ ಭಾಗವಹಿಸಿ ಗಮನಸೆಳೆದರೆ, ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ತೋರಿದ 50 ಶಾಲಾ ಶಿಕ್ಷಕರನ್ನು ಶಿಕ್ಷಣ ಸಚಿವಾಲಯವು ವಿಶೇಷ ಅತಿಥಿಗಳಾಗಿ ಆಹ್ವಾನಿಸಿತ್ತು.

* ಭಾರತ ಮೂಲದ ಅಮೆರಿಕ ಸಂಸದ ರೊ ಖನ್ನಾ, ಮೈಖೇಲ್ ವಾಟ್ಜ್‌ ಸೇರಿದಂತೆ 50 ಸದಸ್ಯರ ಅಮೆರಿಕದ ನಿಯೋಗವು ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

* ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಧರ್ಮೇಂದ್ರ ಪ್ರಧಾನ್,ನಿರ್ಮಲಾ ಸೀತಾರಾಮನ್, ನಿತಿನ್‌ ಗಡ್ಕರಿ, ಅನುರಾಗ್ ಠಾಕೂರ್, ಸ್ಮೃತಿ ಇರಾನಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೆಪ್ಟಿನೆಂಟ್‌ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರೂ ಭಾಗವಹಿಸಿದ್ದರು.

* ಕೆಂಪುಕೋಟೆಯ ಸೌಂದರ್ಯ ಹೆಚ್ಚಿಸಿದ್ದ ಪುಷ್ಪಾಲಂಕಾರದಲ್ಲಿ ಜಿ20 ಲಾಂಛನ ಕೂಡ ಸೇರಿತ್ತು. ಭಾಷಣದ ಬಳಿಕ ಪ್ರಧಾನಿ ಎನ್‌ಸಿಸಿ ಕೆಡೆಟ್‌ಗಳನ್ನು ಭೇಟಿ ಮಾಡಿದರು. ಪ್ರಧಾನಿ ಆಗಮಿಸಿದ ಕೂಡಲೇ ‘ವಂದೇ ಮಾತರಂ’, ‘ಭಾರತ್ ಮಾತಾ ಕೀ ಜೈ’ ಘೋಷಣೆಗಳು ಕೇಳಿಬಂದವು.

* ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. 10 ಸಾವಿರಕ್ಕೂ ಹೆಚ್ಚು ಜನರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಚಹರೆಯನ್ನು ಗುರುತಿಸುವ ಹಾಗೂ ವಿಡಿಯೊ ವಿಶ್ಲೇಷಣೆಯ ವ್ಯವಸ್ಥೆಯನ್ನು ಒಳಗೊಂಡಂತೆ  ಆಯಕಟ್ಟಿನ ಸ್ಥಳಗಳಲ್ಲಿ ಸುಮಾರು 1,000 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT