ಚೆನ್ನೈ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದ ನಕಲಿ ಎನ್‌ಸಿಸಿ ಶಿಬಿರದಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬುಧವಾರ ಆದೇಶಿಸಿದ್ದಾರೆ.
ಐಪಿಎಸ್ ಅಧಿಕಾರಿ ಕೆ.ಭವಾನೀಶ್ವರಿ ಅವರ ನೇತೃತ್ವದ ಎಸ್‌ಐಟಿ ತಂಡ ಪ್ರಕರಣದ ತನಿಖೆ ನಡೆಸಲಿದ್ದು, 15 ದಿನಗಳೊಳಗೆ ಪ್ರಕರಣ ಬೇಧಿಸುವಂತೆ ಮತ್ತು 60 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸುವಂತೆ ಸೂಚಿಸಲಾಗಿದೆ.
ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಬಹು-ಶಿಸ್ತಿನ ತಂಡವನ್ನು (ಎಂಡಿಟಿ) ರಚಿಸುವಂತೆಯೂ ಸಿಎಂ ಸ್ಟಾಲಿನ್ ಸೂಚಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಜಯಶ್ರೀ ಮುರಳೀಧರನ್ ನೇತೃತ್ವದ ಎಂಡಿಟಿ ತಂಡದಲ್ಲಿ ಪೊಲೀಸ್ ಹಾಗೂ ಶಾಲಾ ಶಿಕ್ಷಣ ಇಲಾಖೆಗಳ ಪ್ರತಿನಿಧಿಗಳು ಇರಲಿದ್ದಾರೆ.
ದೌರ್ಜನ್ಯಕ್ಕೊಳಗಾದ ಮಕ್ಕಳ ಯೋಗಕ್ಷೇಮಕ್ಕಾಗಿ ಶಿಫಾರಸನ್ನು ಕೂಡ ಸಮಿತಿಯು ಮಾಡಲಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆಯೂ ಸಿಎಂ ಸೂಚಿಸಿದ್ದಾರೆ.
11 ಮಂದಿ ಬಂಧನ...
ಕೃಷ್ಣಗಿರಿ ಜಿಲ್ಲೆಯ ಬರ್ಗೂರಿನಲ್ಲಿ ಇತ್ತೀಚೆಗೆ ನಡೆದಿದ್ದ ನಕಲಿ ಎನ್‌ಸಿಸಿ ಶಿಬಿರದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮುಖ್ಯ ಆರೋಪಿ ಸೇರಿದಂತೆ ಈವರೆಗೆ 11 ಮಂದಿಯನ್ನು ಬಂಧಿಸಲಾಗಿದೆ.