ಚೆನ್ನೈ: ತಮಿಳುನಾಡಿನ ಮೆಲ್ಮರುವತ್ತೂರಿನ ಅರುಳ್ಮಿಗು ಆದಿಪರಾಶಕ್ತಿ ದೇವಸ್ಥಾನದ ಗರ್ಭಗುಡಿಯೊಳಗೆ ದಶಕಗಳ ಹಿಂದೆಯೇ ಮಹಿಳೆಯರಿಗೆ ಪ್ರವೇಶ ನೀಡಿ ಕ್ರಾಂತಿ ಮೂಡಿಸಿದ್ದ ಖ್ಯಾತ ಆಧ್ಯಾತ್ಮಿಕ ಗುರು ಬಂಗಾರು ಅಡಿಗಲರ್ (82) ಗುರುವಾರ ಇಲ್ಲಿ ನಿಧನರಾದರು.
ತಮ್ಮ ಅನುಯಾಯಿಗಳಿಂದ ಅಮ್ಮ ಎಂದೇ ಕರೆಯಲ್ಪಡುತ್ತಿದ್ದ ಬಂಗಾರು ಅಡಿಗಲರ್, ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರಿಗೆ ಗುರುವಾರ ಸಂಜೆ ಹೃದಯಾಘಾತವಾಗಿತ್ತು. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಅವರ ಕುಟುಂಬದ ಒಡೆತನದಲ್ಲಿ ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಿವೆ.
ಚೆನ್ನೈನಿಂದ 90 ಕಿ.ಮೀ ದೂರದಲ್ಲಿರುವ ಮೆಲ್ಮರುವತ್ತೂರಿನ ಆದಿಪರಾಶಕ್ತಿ ದೇವಸ್ಥಾನ ಸೇರಿದಂತೆ ತಮ್ಮ ನಿರ್ವಹಣೆಯಲ್ಲಿದ್ದ ಇತರ ಧಾರ್ಮಿಕ ಸಂಸ್ಥೆಗಳ ಒಳಗೆ ಮಹಿಳೆಯರಿಗೆ, ಅವರ ಋತುಚಕ್ರದ ಅವಧಿಯೂ ಸೇರಿದಂತೆ ಎಲ್ಲ ದಿನಗಳಲ್ಲೂ ಪ್ರವೇಶಕ್ಕೆ ಅವಕಾಶ ನೀಡುವ ಮೂಲಕ ಅಡಿಗಲರ್ ಕ್ರಾಂತಿಕಾರಿ ಹೆಜ್ಜೆಯಿಟ್ಟಿದ್ದರು. ಅಲ್ಲದೆ ದೇವಸ್ಥಾನಗಳಲ್ಲಿ ಪುರುಷರಂತೆ ಮಹಿಳೆಯರಿಗೂ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು.
ಲಕ್ಷಾಂತರ ಮಹಿಳೆಯರು ಅಡಿಗಲರ್ ಅವರನ್ನು ಅನುಸರಿಸಲು ಮುಂದಾದರು. ಇದರ ಪರಿಣಾಮ ತಮಿಳುನಾಡಿನಾದ್ಯಂತ ಸಾವಿರಾರು ಆದಿಪರಾಶಕ್ತಿ ದೇವಾಲಯಗಳು ಹುಟ್ಟಿಕೊಂಡವು. ಅನೇಕ ಮಹಿಳೆಯರು ತಮ್ಮ ಗ್ರಾಮ ಮತ್ತು ಪಟ್ಟಣಗಳಿಂದ ದೇವಿಯ ದರ್ಶನಕ್ಕಾಗಿ ಕಾಲ್ನಡಿಗೆ ಕೈಗೊಳ್ಳುತ್ತಾರೆ.
ಬಂಗಾರು ಅಡಿಗಲರ್ ಅವರ ನಿಧನಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.