ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಅಥ್ಲೆಟಿಕ್‌ ಕೂಟ: ಯುವ ಅಥ್ಲೀಟ್‌ಗಳ ಹೊಳಪು

ಮಂಗಳೂರಿನಲ್ಲಿ ಇಂದಿನಿಂದ ಜೂನಿಯರ್‌, ಯೂಥ್ ಅಥ್ಲೆಟಿಕ್‌ ಟ್ರ್ಯಾಕ್‌–ಫೀಲ್ಡ್‌ ಚಾಂಪಿಯನ್‌ಷಿಪ್
Published 26 ಸೆಪ್ಟೆಂಬರ್ 2023, 23:20 IST
Last Updated 26 ಸೆಪ್ಟೆಂಬರ್ 2023, 23:20 IST
ಅಕ್ಷರ ಗಾತ್ರ

ಮಂಗಳೂರು: ಕಡಲ ತಡಿಯ ಮಂಗಳೂರು ನಗರ 39 ವರ್ಷಗಳ ನಂತರ ರಾಜ್ಯಮಟ್ಟದ ಅಥ್ಲೆಟಿಕ್‌ ಕೂಟಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದೆ. ನವ ಮತ್ತು ಯುವ ಕ್ರೀಡಾಪಟುಗಳು ಪದಕದ ಹೊಳಪಿನಲ್ಲಿ ಸಂಭ್ರಮಿಸುವ ಉತ್ಸಾಹದಲ್ಲಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆಯ ಸಹಯೋಗದಲ್ಲಿ ರಾಜ್ಯ ಅಥ್ಲೆಟಿಕ್‌ ಸಂಸ್ಥೆ (ಕೆಎಎ) ಆಯೋಜಿಸಿರುವ ರಾಜ್ಯ ಜೂನಿಯರ್‌ ಮತ್ತು ಯೂಥ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಬುಧವಾರ ಮಂಗಳ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಇದೇ 30ರ ವರೆಗೆ ನಡೆಯಲಿದೆ.

ಬಹುಶಿಸ್ತೀಯ ಕ್ರೀಡಾಪಟು ಲೋಕನಾಥ ಬೋಳಾರ್ ಸ್ಮರಣೆಯಲ್ಲಿ ಮೊಗವೀರ ವ್ಯವಸ್ಥಾಪನಾ ಮಂಡಳಿ ಮತ್ತು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಚಾಂಪಿಯನ್‌ಷಿಪ್‌ನ ಪ್ರಾಯೋಜಕತ್ವ ವಹಿಸಿಕೊಂಡಿವೆ. 

ಯೂಥ್ ವಿಭಾಗದಲ್ಲಿ ತುರುಸಿನ ಪೈಪೋಟಿ ನಿರೀಕ್ಷೆ

ದಕ್ಷಿಣ ವಲಯ, ರಾಷ್ಟ್ರೀಯ ಜೂನಿಯರ್ ಮತ್ತು 23 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಆಯ್ಕೆ ಪ್ರಕ್ರಿಯೆಯೂ ಮಂಗಳೂರು ಕೂಟದಲ್ಲಿ ನಡೆಯಲಿದೆ. ಉಡುಪಿ ಜಿಲ್ಲೆಯ ಅಭಿನ್ ದೇವಾಡಿಗ (100 ಮೀ), ಧ್ರುವ ಬಲ್ಲಾಳ್ (400 ಮೀ), ಕೀರ್ತನಾ ಎಸ್‌ (200 ಮೀ) ದಕ್ಷಿಣ ಕನ್ನಡ ಜಿಲ್ಲೆಯ ಮಹಾಂತೇಶ್‌ ಮತ್ತು ತೀರ್ಥೇಶ್‌ ಶೆಟ್ಟಿ (400 ಮೀ), 200 ಮೀಟರ್ಸ್ ಓಟದಲ್ಲಿ ಈ ಬಾರಿ ರಾಜ್ಯ ದಾಖಲೆ ಮುರಿದಿರುವ ಹಾವೇರಿಯ ಶಶಿಕಾಂತ್‌ ವಿ.ಎ ಸ್ಪರ್ಧಾ ಕಣದಲ್ಲಿ ಇದ್ದಾರೆ. ಮಹಿಳೆಯರ 100 ಮತ್ತು 200 ಮೀಟರ್ಸ್ ಓಟದಲ್ಲಿ ಬೆಂಗಳೂರಿನ ಪ್ರಿಯಾ ಮೋಹನ್, ಹೈಜಂಪ್‌ನಲ್ಲಿ ಬೆಂಗಳೂರಿನ ಪಾವನಾ ನಾಗರಾಜ್, ದಕ್ಷಿಣ ಕನ್ನಡದ ಸುಪ್ರೀತಾ, 100 ಮತ್ತು 200 ಮೀಟರ್ಸ್ ಓಟದಲ್ಲಿ ಬೆಂಗಳೂರಿನ ಉನ್ನತಿ ಅಯ್ಯಪ್ಪ ಸ್ಪರ್ಧಿಸುತ್ತಿದ್ದಾರೆ.

ರಿಲೆ ರೋಮಾಂಚನ ಇಲ್ಲ

ಈ ಬಾರಿ ಚಾಂಪಿಯನ್‌ಷಿಪ್‌ನ ಯಾವ ವಿಭಾಗದಲ್ಲೂ ರಿಲೆ ಸ್ಪರ್ಧೆ ಇಲ್ಲ. ‘ರಾಷ್ಟ್ರೀಯ ಕೂಟಕ್ಕೆ ರಿಲೆ ತಂಡವನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಲಾಗುವುದು’ ಎಂದು ಕೆಎಎ ಗೌರವ ಕಾರ್ಯದರ್ಶಿ ಎ.ರಾಜವೇಲು ‘ಪ್ರಜಾವಾಣಿ’ಗೆ ತಿಳಿಸಿದರು.

1610: ಐದೂ ವಿಭಾಗಗಳಲ್ಲಿ ಪಾಲ್ಗೊಳ್ಳುವ ಒಟ್ಟು ಅಥ್ಲೀಟ್ಸ್‌

231: ಅತಿ ಹೆಚ್ಚು, ಬೆಂಗಳೂರು ನಗರ ಜಿಲ್ಲೆಯ ಅಥ್ಲೀಟ್ಸ್‌

161: ಆತಿಥೇಯ ದಕ್ಷಿಣ ಕನ್ನಡ ಜಿಲ್ಲೆಯಿಂದ ಪಾಲ್ಗೊಳ್ಳುವವರು

30: ಕೂಟದಲ್ಲಿ ಪಾಲ್ಗೊಳ್ಳುವ ಒಟ್ಟು ಜಿಲ್ಲೆಗಳು

3: ಅತಿ ಕಡಿಮೆ, ಬೀದರ್‌ ಜಿಲ್ಲೆಯಿಂದ ಪಾಲ್ಗೊಳ್ಳುವವರು

(ಮಾಹಿತಿ: ಕೆಎಎ)

[object Object]

ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳವಾರ ದೈಹಿಕ ಕಸರತ್ತು ನಡೆಸಿದ ಕ್ರೀಡಾಪಟುಗಳು –

ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್

ಅಥ್ಲೆಟಿಕ್ಸ್‌ನಲ್ಲಿ ಈಗ ಬದಲಾವಣೆಯ ಕಾಲ. ಇಂಥ ಸಂದರ್ಭದಲ್ಲಿ ಸಾಧನೆ ಮಾಡಲು ಈ ಚಾಂಪಿಯನ್‌ಷಿಪ್ ನೆರವಾಗಲಿದೆ. ಅಥ್ಲೆಟಿಕ್ಸ್‌ಗೆ ಹೆಸರು ಗಳಿಸಿರುವ ಮಂಗಳೂರಿನಲ್ಲಿ ಕೂಟ ನಡೆಯುತ್ತಿರುವುದು ಖುಷಿ ತಂದಿದೆ.

-ವಿಲಾಸ ನೀಲಗುಂದ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT