ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಸೋಲು: BRSನಿಂದ TRSಗೆ ಮರಳಲು ಕೆಸಿಆರ್ ಚಿಂತನೆ

Published 13 ಜನವರಿ 2024, 11:15 IST
Last Updated 13 ಜನವರಿ 2024, 11:15 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬೆನ್ನಲ್ಲೇ, ಭಾರತ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಎಂದು ಬದಲಿಸುವಂತೆ ಒತ್ತಾಯಿಸಿದ್ದಾರೆ. 

ಕೆಸಿಆರ್ ಪುತ್ರ ಹಾಗೂ ಪಕ್ಷದ ಕಾರ್ಯಾಧ್ಯಕ್ಷ ಕೆ. ಟಿ. ರಾಮ ರಾವ್ ನೇತೃತ್ವದಲ್ಲಿ ಜ.3ರಿಂದ ಕ್ಷೇತ್ರವಾರು ಸಭೆ ನಡೆಸಲಾಗುತ್ತಿದೆ. ಲೋಕಸಭಾ ಚುನಾವಣೆ ಸಿದ್ಧತೆ ಮತ್ತು ಪಕ್ಷದ ಸೋಲಿನ ಕಾರಣಗಳ ಕುರಿತು ಪಕ್ಷದ ಮುಖಂಡರು, ಕಾರ್ಯಕರ್ತರ ಸಲಹೆಗಳನ್ನು ಪಡೆಯುತ್ತಿದ್ದಾರೆ. ಈ ವೇಳೆ ಪಕ್ಷದ ಹೆಸರು ಬದಲಾವಣೆಯೂ ಚುನಾವಣೆ ಸೋಲಿಗೆ ಕಾರಣವೆಂಬ ಅಭಿಪ್ರಾಯಗಳು ಕೇಳಿಬಂದಿವೆ.

‘ಪಕ್ಷದ ಹೆಸರಿನಲ್ಲಿ ‘ತೆಲಂಗಾಣ’ವನ್ನು ತೆಗೆದು ಹಾಕಿದ್ದರಿಂದ ರಾಜ್ಯದ ಜನರಿಂದ ಬೇರ್ಪಟ್ಟಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪಕ್ಷದ ಕೆಲ ನಾಯಕರು, ಕಾರ್ಯಕರ್ತರು ಪಕ್ಷದ ಕಾರ್ಯಧ್ಯಕ್ಷ ಕೆ.ಟಿ ರಾಮ ರಾವ್ ಅವರಿಗೆ ಮನವರಿಕೆ ಮಾಡಿದ್ದಾರೆ. ಅಲ್ಲದೇ ಮತ್ತೆ ಹಳೆ ಹೆಸರನ್ನೇ(ಟಿಆರ್‌ಎಸ್‌) ಮುಂದುವರಿಸುಂತೆಯೂ ಸಲಹೆಗಳನ್ನು ನೀಡಿದ್ದಾರೆ’ ಎಂದು ಪಕ್ಷದ ಹಿರಿಯ ಮುಖಂಡರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಪಕ್ಷದ ಹೆಸರನ್ನು ಟಿಆರ್‌ಎಸ್‌ನಿಂದ ಬಿಆರ್‌ಎಸ್ ಎಂದು ಮರುನಾಮಕರಣ ಮಾಡಿರುವುದು ಪಕ್ಷದ ಎಷ್ಟೋ ನಾಯಕರಿಗೆ ಇಷ್ಟವಿರಲಿಲ್ಲ. ಆದರೂ ಅವರು ಯಾರೂ ಪಕ್ಷದ ಮುಖಂಡ ಕೆಸಿಆರ್‌ ವಿರುದ್ಧ ಧ್ವನಿ ಎತ್ತಲಿಲ್ಲ. ಹೆಸರು ಬದಲಾವಣೆ ಮಾಡಿರುವುದು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪ್ರಮುಖ ಐದು ಕಾರಣಗಳಲ್ಲಿ ಒಂದಾಗಿದೆ’ ಎಂದು ಅವರು ಹೇಳಿದರು. ಶೀಘ್ರದಲ್ಲೇ ಈ ಕುರಿತ ಸ್ಪಷ್ಟ ನಿಲುವು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. 

ತೆಲಂಗಾಣದ ಜೊತೆಗೆ ಇತರ ರಾಜ್ಯಗಳಿಗೂ ಪಕ್ಷವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೆಸಿಆರ್ ಅವರು 2022ರಲ್ಲಿ ಟಿಆರ್‌ಎಸ್ ಪಕ್ಷದ ಹೆಸರನ್ನು ಬಿಆರ್‌ಎಸ್ ಎಂದು ಬದಲಿಸಿದ್ದರು. ಆದರೆ, ತೆಲಂಗಾಣ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ದೇಶದ ಇತರ ಭಾಗಕ್ಕೂ ಪಕ್ಷವನ್ನು ವಿಸ್ತರಿಸಬೇಕೆಂಬ ಯೋಜನೆ ಹಳಿ ತಪ್ಪಿದೆ. 

ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಆರ್‌ಎಸ್ 39 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. 64 ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT