ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಲಂಕಾ ವಶದಲ್ಲಿ ಭಾರತೀಯ ಮೀನುಗಾರರು: ನೆರವು ಕೋರಿ ಕೇಂದ್ರಕ್ಕೆ ಸ್ಟಾಲಿನ್ ಪತ್ರ

Published : 9 ಸೆಪ್ಟೆಂಬರ್ 2024, 11:39 IST
Last Updated : 9 ಸೆಪ್ಟೆಂಬರ್ 2024, 11:39 IST
ಫಾಲೋ ಮಾಡಿ
Comments

ಚೆನ್ನೈ: ಶ್ರೀಲಂಕಾ ನೌಕಾಪಡೆಯು ಬಂಧಿಸಿರುವ ತಮಿಳುನಾಡಿನ 14 ಮಂದಿ ಮೀನುಗಾರರನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ. 

ಕಳೆದ ಶನಿವಾರ ಪುದುಕ್ಕೊಟ್ಟೈ ಜಿಲ್ಲೆಯ 14 ಮೀನುಗಾರರನ್ನು ಬಂಧಿಸಿ ಅವರ ಮೂರು ದೋಣಿಗಳನ್ನು ಶ್ರೀಲಂಕಾ ವಶಪಡಿಸಿಕೊಂಡಿದೆ. ಶ್ರೀಲಂಕಾ ಅಧಿಕಾರಿಗಳು ಭಾರತೀಯ ಮೀನುಗಾರರನ್ನು ಬಂಧಿಸುವ ಘಟನೆಗಳು ಇತ್ತೀಚೆಗೆ ಭಾರಿ ಏರಿಕೆಯಾಗಿವೆ ಎಂದು ಸ್ಟಾಲಿನ್‌ ಕಳವಳ ವ್ಯಕ್ತಪಡಿಸಿದರು. 

ಜೈಶಂಕರ್‌ ಅವರಿಗೆ ಬರೆದಿರುವ ಪತ್ರದಲ್ಲಿ ಅವರು ‘ಶ್ರೀಲಂಕಾ ವಶದಲ್ಲಿರುವ 14 ಮೀನುಗಾರರು ಹಾಗೂ ಅವರ ದೋಣಿಗಳನ್ನು ಬಿಡುಗಡೆಗೊಳಿಸಲು ಮತ್ತು ಅವರ ಮೇಲೆ ವಿಧಿಸಲಾಗಿರುವ ಭಾರಿ ಪ್ರಮಾಣದ ದಂಡವನ್ನು ಮನ್ನಾ ಮಾಡಲು ತಕ್ಷಣವೇ ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸಿ’ ಎಂದು ಒತ್ತಾಯಿಸಿದ್ದಾರೆ. 

ಈ ವರ್ಷವೇ 350 ಮಂದಿಯ ಬಂಧನ 

ಈ ವರ್ಷದ ಜನವರಿಯಿಂದ ಸೆ.7ರವರೆಗೆ ರಾಜ್ಯದ 350 ಮಂದಿ ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ. ಒಟ್ಟು 49 ದೋಣಿಗಳನ್ನು ವಶಪಡಿಸಿಕೊಂಡಿದೆ. ಇದು ಕಳೆದ ಆರು ವರ್ಷಗಳ ಅವಧಿಯಲ್ಲೇ ಅಧಿಕವಾಗಿದೆ. ಅಲ್ಲದೇ ಇತ್ತೀಚೆಗೆ ಶ್ರೀಲಂಕಾ ನ್ಯಾಯಾಲಯಗಳು ಮೀನುಗಾರರ ಮೇಲೆ ಭಾರಿ ಪ್ರಮಾಣದ ದಂಡವನ್ನು ವಿಧಿಸುತ್ತಿವೆ. ಈ ದಂಡದ ಪ್ರಮಾಣವನ್ನು ಮನ್ನಾ ಮಾಡುವ ಕುರಿತು ಕೇಂದ್ರವು ಮಧ್ಯಸ್ಥಿಕೆ ವಹಿಸಬೇಕು ಎಂದು ಸ್ಟಾಲಿನ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT