ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ವರ್ಷದ ಮಗನ ಕೊಲೆ | ತಾಯಿಯದ್ದು ಪೂರ್ವ ಯೋಜಿತ ಕೃತ್ಯ: ಗೋವಾ ಪೊಲೀಸರ ಶಂಕೆ   

Published 10 ಜನವರಿ 2024, 15:18 IST
Last Updated 10 ಜನವರಿ 2024, 15:18 IST
ಅಕ್ಷರ ಗಾತ್ರ

ಪಣಜಿ: ‘ನಾಲ್ಕು ವರ್ಷದ ಪುತ್ರನನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿರುವ ‘ಮೈಂಡ್‌ಫುಲ್‌ ಎ.ಐ ಲ್ಯಾಬ್‌’ ನವೋದ್ಯಮ ಕಂಪನಿಯ ಮಹಿಳಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸುಚನಾ ಸೇಠ್‌ ತಂಗಿದ್ದ ಕೊಠಡಿಯಲ್ಲಿ ಕೆಮ್ಮಿನ ಸಿರಪ್‌ನ ಎರಡು ಖಾಲಿ ಬಾಟಲಿಗಳು ಪತ್ತೆಯಾಗಿವೆ. ಮಗುವಿನ ಕೊಲೆ ಒಂದು ಪೂರ್ವ ಯೋಜಿತ ಕೃತ್ಯದಂತೆ ಕಾಣಿಸುತ್ತಿದೆ’ ಎಂದು ಗೋವಾ ಪೊಲೀಸರು ಶಂಕಿಸಿದ್ದಾರೆ.  

ಮಹಿಳೆ ತಂಗಿದ್ದ ಸರ್ವೀಸ್ ಅಪಾರ್ಟ್‌ಮೆಂಟ್ ಕೊಠಡಿಯ ತಪಾಸಣೆಯ ವೇಳೆ ಕೆಮ್ಮಿನ ಸಿರಪ್‌ನ ಎರಡು ಖಾಲಿ ಬಾಟಲಿಗಳು (ಒಂದು ದೊಡ್ಡದು ಮತ್ತು ಇನ್ನೊಂದು ಚಿಕ್ಕದು) ಪತ್ತೆಯಾಗಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪಿಟಿಐ’ಗೆ ಖಚಿತಪಡಿಸಿದ್ದಾರೆ.

‘ದಿಂಬು ಅಥವಾ ಬಟ್ಟೆ ಬಳಸಿ ಉಸಿರುಗಟ್ಟಿಸಿ ಸಾಯಿಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮಗು ಸಾಯುವಾಗ ಒದ್ದಾಡಿಲ್ಲ. ಮಗುವಿಗೆ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ನೀಡಿರುವ ಸಾಧ್ಯತೆಯ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಇದೊಂದು ಪೂರ್ವ ಯೋಜಿತ ಕೊಲೆಯಂತೆ ಕಾಣಿಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ಅಪಾರ್ಟ್‌ಮೆಂಟ್ ಸಿಬ್ಬಂದಿಯನ್ನು ವಿಚಾರಿಸಿದಾಗ, ಮಹಿಳೆಯು ತನಗೆ ಕೆಮ್ಮು ಇರುವುದಾಗಿ ಹೇಳಿ, ಕೆಮ್ಮಿನ ಸಿರಪ್‌ನ ಸಣ್ಣ ಬಾಟಲಿ ತಂದುಕೊಡುವಂತೆ ಮೊದಲು ಕೇಳಿದ್ದರು. ನಂತರ ಇನ್ನೊಂದು ದೊಡ್ಡ ಬಾಟಲಿಯನ್ನು ತರುವಂತೆ ಸಿಬ್ಬಂದಿಗೆ ಹೇಳಿದ್ದರು ಎನ್ನುವುದು ಗೊತ್ತಾಗಿದೆ. ಆದರೆ, ಆರೋಪಿಯು ವಿಚಾರಣೆಯಲ್ಲಿ ತಾನು ಕೊಲೆ ಮಾಡಿಲ್ಲ. ಮಗು ನಿದ್ರೆಯಲ್ಲೇ ಸತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ಮಹಿಳೆಯ ಮಾತು ನಂಬಲು ನಾವು ಸಿದ್ಧವಿಲ್ಲ. ಮಗುವನ್ನು ಕೊಂದಿರುವುದರ ಹಿಂದಿನ ಉದ್ದೇಶ ಹೆಚ್ಚಿನ ತನಿಖೆಯಿಂದ ಬಹಿರಂಗವಾಗಲಿದೆ. ಸದ್ಯ, ಮಹಿಳೆ ಮತ್ತು ಆಕೆಯ ಪತಿ ದೂರವಾಗಿದ್ದರು. ಅದಕ್ಕಾಗಿಯೇ ಮಹಿಳೆ ಮಗು ಕೊಂದಿರಬಹುದೆಂಬ ಮಾಹಿತಿ ಇದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆರೋಪಿ ಮಹಿಳೆ ಸುಚನಾ ಸೇಠ್, ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಮಗನನ್ನು ಕೊಂದು ಶವವನ್ನು ಬ್ಯಾಗ್‌ನಲ್ಲಿ ತುಂಬಿ ಕಾರಿನಲ್ಲಿ ಬೆಂಗಳೂರಿನತ್ತ ಸಾಗಿಸುತ್ತಿದ್ದಾಗ ಚಿತ್ರದುರ್ಗದ ಐಮಂಗಲ ಠಾಣೆಯ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದರು. ಆರೋಪಿಯನ್ನು ಮಂಗಳವಾರ ಗೋವಾ ಪೊಲೀಸರಿಗೆ ಒಪ್ಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT