ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರಯಾನ–3ರ ಯಶಸ್ಸು ಮೋದಿ ಆರ್ಥಿಕತೆಯ ಕನಸನ್ನು ನನಸಾಗಿಸಲಿದೆ: ಬಿಜೆಪಿ

Published 26 ಆಗಸ್ಟ್ 2023, 16:23 IST
Last Updated 26 ಆಗಸ್ಟ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ‍ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಪೀಣ್ಯದಲ್ಲಿರುವ ಇಸ್ರೊ ಕಚೇರಿಗೆ ಭೇಟಿ ನೀಡಿ ಚಂದ್ರಯಾನ–3ರ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳನ್ನು ಅಭಿನಂದಿಸಿದರು. ಇದರ ಬೆನ್ನಲ್ಲೇ ಚಂದ್ರಯಾನ–2 ವಿಫಲಗೊಂಡಾಗ ಮೋದಿ ಅವರು ವಿಜ್ಞಾನಿಗಳಿಗೆ ನೀಡಿದ ಸಹಕಾರದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಿಜೆಪಿ ಬರೆದುಕೊಂಡಿದೆ.

ಇಸ್ರೊ ಸಂಸ್ಥೆಯ ಮಹತ್ವದ ಚಂದ್ರಯಾನ–2 ವಿಫಲಗೊಂಡಾಗ, ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್‌ ಹೇಳಿಸಿತ್ತು. ಆದರೆ, ಪ್ರಧಾನಿ ಮೋದಿ ಸರ್ಕಾರದ ಸಹಕಾರ ಹಾಗೂ ವಿಜ್ಞಾನಿಗಳ ಶಕ್ತಿ–ಭಕ್ತಿ–ಯುಕ್ತಿಯ ನಿರಂತರ ಪರಿಶ್ರಮದಿಂದಾಗಿ ಚಂದ್ರಯಾನ–3 ಯಶಸ್ವಿಯಾಗಿದೆ ಎಂದು ಬಿಜೆಪಿ ತಿಳಿಸಿದೆ.

ಈ ಯಶಸ್ಸು ಭಾರತದ ಬಾಹ್ಯಾಕಾಶ ಕ್ಷೇತ್ರದ ಆಯಾಮವನ್ನೇ ಬದಲಿಸಿದ್ದು, ಭಾರತ ಬಾಹ್ಯಾಕಾಶ, ಸಂಶೋಧನೆ ಕ್ಷೇತ್ರದಲ್ಲಿ ಪ್ರಬಲ ರಾಷ್ಟ್ರವಾಗಿ ಜಾಗತಿಕ ಮನ್ನಣೆ ಪಡೆದಿದೆ. ಚಂದ್ರಯಾನದ ಪ್ರತಿ ಅಧ್ಯಯನದ ಅಂಶಗಳು, ಅಲ್ಲಿಂದ ತೆಗೆದ ಫೋಟೊ, ವಿಡಿಯೊಗಳೆಲ್ಲವೂ ಸಹ ಭಾರತದ ಆಸ್ತಿಯಾಗಲಿದೆ. ಡಾಕ್ಯುಮೆಂಟರಿ ಹಾಗೂ ಇತರೆ ಅಧ್ಯಯನ–ಮನೋರಂಜನಾತ್ಮಕ ಚಿತ್ರಿಕೆಗಳಲ್ಲಿ ಅವುಗಳನ್ನು ಬಳಸಲು ಇಸ್ರೊಗೆ ಹಣ ನೀಡಿ ಖರೀದಿಸಬೇಕು. ಹಾಗೆಯೇ ಚಂದಿರನ ಬಗ್ಗೆ ಅಧ್ಯಯನ ಮಾಡುವ ಇತರ ದೇಶಗಳು ಈ ದತ್ತಾಂಶ ಖರೀದಿಗೆ ಉತ್ಸುಕರಾಗುವ ಕಾರಣ ಇಸ್ರೊಗೆ ಹೊಸ ವ್ಯವಹಾರಿಕ ಮಾರ್ಗ ತೆರೆಯಲಿದೆ ಎಂದು ಬಿಜೆಪಿ ಹೇಳಿದೆ.

2021ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆರ್ಟಿಮಿಸ್‌ ಕಾರ್ಯಕ್ರಮದ ಮಾಹಿತಿಯಿಂದ 2.2 ಬಿಲಿಯನ್‌ ಡಾಲರ್‌ ಸಂಗ್ರಹಿಸುವ ಜತೆಗೆ 37 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿತ್ತು. ಇದೇ ಮಾದರಿಯಲ್ಲಿ ಚಂದ್ರಯಾನ–3ರ ಯಶಸ್ಸು ಸಹ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ಕಲ್ಪವೃಕ್ಷದಂತೆ ಚಂದ್ರಯಾನದ ಯಶಸ್ಸು ಭಾರತಕ್ಕೆ ಹೇರಳ ಅವಕಾಶಗಳನ್ನು ಕಲ್ಪಿಸುವುದರ ಜೊತೆ ಜೊತೆಗೆ ಪ್ರಧಾನಿ ಮೋದಿ ಅವರ ಗುರಿಯಾದ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಕನಸನ್ನು ನನಸಾಗಿಸಲಿದೆ. ಕೇವಲ ಆರ್ಥಿಕತೆಯ ದೃಷ್ಟಿಯಲ್ಲಿ ಮಾತ್ರವಲ್ಲದೇ ಚಂದ್ರಯಾನ–3ರ ಯಶಸ್ಸು ರಕ್ಷಣಾ ವ್ಯವಸ್ಥೆಯಲ್ಲಿಯೂ ಸಹ ಭಾರತವನ್ನು ಆತ್ಮನಿರ್ಭರವನ್ನಾಗಿಸಲಿದೆ ಎಂದು ಬಿಜೆಪಿ ತಿಳಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT