ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲುಗಳಲ್ಲಿ ಅಸ್ವಾಭಾವಿಕ ಸಾವು: ಆತ್ಮಹತ್ಯೆಯೇ ಪ್ರಮುಖ ಕಾರಣ– ವರದಿ

‘ಸುಪ್ರೀಂ’ ನೇಮಿಸಿದ ‘ಜೈಲುಗಳ ಸುಧಾರಣಾ ಸಮಿತಿ’ ವರದಿಯಲ್ಲಿ ಉಲ್ಲೇಖ
Published 31 ಆಗಸ್ಟ್ 2023, 11:33 IST
Last Updated 31 ಆಗಸ್ಟ್ 2023, 11:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಜೈಲುಗಳಲ್ಲಿ 2017ರಿಂದ 2021ರ ನಡುವೆ  817 ಅಸ್ವಾಭಾವಿಕ ಸಾವುಗಳು ವರದಿಯಾಗಿದ್ದು, ಆತ್ಮಹತ್ಯೆಯೇ ಪ್ರಮುಖ ಕಾರಣ ಎಂದು ಸುಪ್ರೀಂಕೋರ್ಟ್‌ ರಚಿಸಿರುವ ‘ಜೈಲುಗಳ ಸುಧಾರಣೆ ಕುರಿತ ಸಮಿತಿ’ಯ ವರದಿಯಲ್ಲಿ ಹೇಳಲಾಗಿದೆ.

ಸೆರೆವಾಸದಲ್ಲಿರುವವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟುವಂತಹ ಜೈಲುಗಳನ್ನು ನಿರ್ಮಿಸುವ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಸಮಿತಿಯು ಪ್ರತಿಪಾದಿಸಿದೆ.

‘817 ಅಸ್ವಾಭಾವಿಕ ಸಾವುಗಳ ಪೈಕಿ 660 ಜೈಲುವಾಸಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಗರಿಷ್ಠ 101 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಮಿತವ್‌ ರಾಯ್‌ ನೇತೃತ್ವದ ಸಮಿತಿ ಹೇಳಿದೆ.

ಸಮಿತಿ ವರದಿಯಲ್ಲಿನ ಪ್ರಮುಖ ಅಂಶಗಳು

* ಜೈಲುಗಳ ಯಾವ ಸ್ಥಳಗಳಲ್ಲಿ ನೇಣು ಹಾಕಿಕೊಳ್ಳುವ ಪ್ರಕರಣಗಳು ಹೆಚ್ಚಿಗೆ ವರದಿಯಾಗುತ್ತಿವೆ ಎಂಬುದನ್ನು ಗುರುತಿಸಬೇಕು

* ಕೈದಿಗಳು ನೇಣು ಬಿಗಿದುಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಚಾವಣಿ ಕುಸಿಯುವಂತಿರಬೇಕು. ಅಂತಹ ಸಾಮಗ್ರಿಗಳನ್ನು ಬಳಸಿ ಜೈಲುಗಳನ್ನು ನಿರ್ಮಿಸಬೇಕು

* ಕಸ್ಟಡಿಯಲ್ಲಿದ್ದಾಗ ನೀಡುವ ಚಿತ್ರಹಿಂಸೆ, ಸಂಭವಿಸುವ ಸಾವುಗಳಿಂದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇದು ಮಾನವನ ಘನತೆಯನ್ನು ಅವಮಾನಿಸಿದಂತೆ

* 2019ರಿಂದ ಕಸ್ಟಡಿಯಲ್ಲಿನ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ

* 2021ರಲ್ಲಿ ಗರಿಷ್ಠ ಸಂಖ್ಯೆ ಕಸ್ಟಡಿ ಸಾವುಗಳು ಸಂಭವಿಸಿವೆ

* 2017ರಿಂದ 2021ರ ವರೆಗಿನ ಅವಧಿಯಲ್ಲಿ 462 ಕೈದಿಗಳು ಮುಪ್ಪಿನ ಕಾರಣದಿಂದ ಮೃತಪಟ್ಟಿದ್ದರೆ, 7,736 ಕೈದಿಗಳು ಅನಾರೋಗ್ಯದಿಂದಾಗಿ ಸತ್ತಿದ್ದಾರೆ. ಇದೇ ಅವಧಿಯಲ್ಲಿ 41 ಕೈದಿಗಳನ್ನು ಕೊಲೆ ಮಾಡಲಾಗಿದೆ

ಸಮಿತಿ ಮಾಡಿರುವ ಶಿಫಾರಸುಗಳು

* ವಯಸ್ಸಾದ ಹಾಗೂ ಅನಾರೋಗ್ಯದಿಂದ ಬಳಲುವ ಕೈದಿಗಳನ್ನು ಸಾಧ್ಯವಾದಷ್ಟು ನ್ಯಾಯಾಲಯಗಳಿಗೆ ಹಾಜರುಪಡಿಸದೇ, ಅವರ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಬೇಕು

* ಕೈದಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮೂಡುವುದನ್ನು ಮುಂಚಿತವಾಗಿ ಗ್ರಹಿಸುವ ಹಾಗೂ ಅವರನ್ನು ಅಂತಹ ಪ್ರಯತ್ನಗಳಿಂದ ಕಾಪಾಡುವ ಕುರಿತು ಜೈಲು ಸಿಬ್ಬಂದಿಗೆ ತರಬೇತಿ ನೀಡಬೇಕು

* ಕೈದಿಗಳಲ್ಲಿ ಕಂಡುಬರುವ ಖಿನ್ನತೆ ಹಾಗೂ ಅತಿರೇಕ/ಅಸಹಜ ನಡವಳಿಕೆಗಳನ್ನು ಗುರುತಿಸಿ, ಸಕಾಲಕ್ಕೆ ಚಿಕಿತ್ಸೆ ಒದಗಿಸುವ ಕುರಿತು ಸಿಬ್ಬಂದಿಗೆ ತರಬೇತಿ ನೀಡಬೇಕು

* ಪ್ರತಿ ಜೈಲಿನಲ್ಲಿ ‘ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮ’ವನ್ನು ಅನುಷ್ಠಾನಗೊಳಿಸಬೇಕು

* ಜೈಲುಗಳಲ್ಲಿ ಹಿಂಸಾಕೃತ್ಯಗಳನ್ನು ತಡೆಗಟ್ಟುವ ಸಲುವಾಗಿ ಮೊದಲ ಬಾರಿಗೆ ಅಪರಾಧ ಎಸಗಿ ಜೈಲು ಸೇರಿದವರು, ಪದೇಪದೇ ಅಪರಾಧ ಎಸಗುವವರನ್ನು ಗುರುತಿಸಿ, ಪ್ರತ್ಯೇಕಿಸುವ ವ್ಯವಸ್ಥೆ ಜಾರಿಗೊಳಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT