ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AAPಯನ್ನು ಮುಂದಕ್ಕೆ ಕರೆದೊಯ್ಯುವ ಸಾಮರ್ಥ್ಯ ಸುನಿತಾ ಕೇಜ್ರಿವಾಲ್‌ಗಿದೆ: ಸೌರಭ್

Published 5 ಏಪ್ರಿಲ್ 2024, 13:16 IST
Last Updated 5 ಏಪ್ರಿಲ್ 2024, 13:16 IST
ಅಕ್ಷರ ಗಾತ್ರ

ನವದೆಹಲಿ: ‘ಪಕ್ಷ ಹಾಗೂ ಪಕ್ಷದ ಮುಖಂಡರು ಎದುರಿಸುತ್ತಿರುವ ಸಂಕಷ್ಟದ ಸಮಯದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಜತೆಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಇರುವವರು ಮತ್ತು ಕೇಡರ್ ಮಟ್ಟದಲ್ಲಿ ಸಕಾರಾತ್ಮಕ ಪರಿಣಾಮ ಬೀರಬಲ್ಲವರೆಂದರೆ ಅದು ಸುನಿತಾ ಕೇಜ್ರಿವಾಲ್ ಮಾತ್ರ’ ಎಂದು ದೆಹಲಿ ಸರ್ಕಾರದ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಪಿಟಿಐ ಸಂಪಾದಕರ ಜತೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ‘ಜೈಲಿನಲ್ಲಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಂದೇಶವನ್ನು ಅವರ ಪತ್ನಿ ಸುನಿತಾ ಅವರು ಪಕ್ಷದ ಕಾರ್ಯಕರ್ತರಿಗೆ ತಲುಪಿಸುತ್ತಿದ್ದಾರೆ. ಆ ಮೂಲಕ ಕೇಡರ್ ಹಾಗೂ ಪ್ರಮುಖ ನಾಯಕರ ನಡುವಿನ ಸಂಪರ್ಕ ಕೊಂಡಿಯಾಗಿ ಹಾಗೂ ಬಾಂಧವ್ಯವನ್ನೂ ಬೆಸೆಯುವವರಾಗಿದ್ದಾರೆ. ಇದರಿಂದ ಪಕ್ಷವು ಉತ್ತಮ ಸ್ಥಿತಿಯಲ್ಲಿ ಸಾಗಲು ಸಾಧ್ಯವಾಗಿದೆ’ ಎಂದಿದ್ದಾರೆ.

‘ಅರವಿಂದ ಕೇಜ್ರಿವಾಲ್ ಅವರ ಸಂದೇಶವನ್ನು ಅವರು ತಲುಪಿಸುತ್ತಿದ್ದಾರೆ. ಇದು ಪಕ್ಷದ ಕೇಡರ್ ಹಾಗೂ ಸಹಾನುಭೂತಿವುಳ್ಳವರಲ್ಲಿ ಉತ್ತಮ ಪರಿಣಾಮ ಬೀರುತ್ತಿದೆ. ಇದನ್ನು ನಾವು ಇತರರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷವನ್ನು ಒಗ್ಗಟ್ಟಿನಲ್ಲಿ ಕೊಂಡೊಯ್ಯುವ ಸಾಮರ್ಥ್ಯ ಅವರೊಬ್ಬರಿಗೆ ಮಾತ್ರ ಇದೆ’ ಎಂದು ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಸದ್ಯ ಏ. 15ರವರೆಗೂ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಅದೇಶಿಸಿದೆ.

ಕೇಜ್ರಿವಾಲ್ ಬಂಧನದ ನಂತರ ಅವರ ಪತ್ನಿ ಸುನಿತಾ ಅವರು, ಈವರೆಗೂ ಮೂರು ಬಾರಿ ಡಿಜಿಟಲ್ ವೇದಿಕೆ ಮೂಲಕ ಕೇಜ್ರಿವಾಲ್ ಅವರ ಸಂದೇಶವನ್ನು ಓದಿದ್ದಾರೆ. ಮಾರ್ಚ್ 31ರಂದು ನಡೆದ ಇಂಡಿಯಾ ಮೈತ್ರಿಕೂಟದ ಮಹಾರ‍್ಯಾಲಿಯಲ್ಲೂ ಪಾಲ್ಗೊಂಡು ಅಲ್ಲಿಯೂ ಕೇಜ್ರಿವಾಲ್ ಅವರ ಸಂದೇಶ ಓದಿದ್ದರು.

ಸುನಿತಾ ಅವರು ಲೋಕಸಭಾ ಚುನಾವಣೆಯ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭಾರದ್ವಾಜ್, ‘ಒಂದೊಮ್ಮೆ ಹಾಗಾದರೆ ಅದು ಅತ್ಯಂತ ಸಂತಸಕರ ಸುದ್ದಿ. ಆದರೆ ಅದು ಅವರ ವೈಯಕ್ತಿಕ ನಿರ್ಧಾರ’ ಎಂದಿದ್ದಾರೆ.

ಪತಿಯ ಬಂಧನದ ನಂತರ ಸುನಿತಾ ಅವರು ಪಕ್ಷದಲ್ಲಿ ಪ್ರಮುಖ ಸ್ಥಾನಕ್ಕೇರುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೌರಭ್, ‘ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ್ದ ಸಂಜಯ್ ಸಿಂಗ್ ಅವರು ಜಾಮೀನಿನ ಮೇಲೆ ಹೊರ ಬಂದ ನಂತರ ನೇರವಾಗಿ ಕೇಜ್ರಿವಾಲ್ ಅವರ ಮನೆಗೆ ತೆರಳಿ ಸುನಿತಾ ಅವರ ಪಾದಕ್ಕೆರಗಿ ಆಶೀರ್ವಾದ ಪಡೆದರು. ಕುಟುಂಬದಲ್ಲಿ ಹಿರಿಯಣ್ಣ ಒಬ್ಬರು ತೊಂದರೆಗೊಳಗಾದರೆ ಅವರ ಕುಟುಂಬವನ್ನು ಕಾಳಜಿಯಿಂದ ನೋಡಿಕೊಳ್ಳುವುದು ನಮ್ಮ ಸಂಪ್ರದಾಯ’ ಎಂದಿದ್ದಾರೆ.

‘ಕೇಜ್ರಿವಾಲ್ ಅವರ ಬಂಧನದ ನಂತರ ಎಎಪಿ ಪಕ್ಷದೊಳಗೆ ಆಂತರಿಕ ತಿಕ್ಕಾಟ ಶುರುವಾಗಿದೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಕೇಜ್ರಿವಾಲ್ ಅವರನ್ನು ಕುಟುಂಬದ ಸದಸ್ಯ ಎಂದು ಸಂಜಯ್ ಸಿಂಗ್ ನಂಬಿದ್ದಾರೆ. ಹೀಗಾಗಿ ಅವರು ಸುನಿತಾ ಅವರ ಪಾದಕ್ಕೆ ನಮಸ್ಕರಿಸಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಒಂದು ಹಾಗೂ ಒಂದು ಕುಟುಂಬದವರಂತೆ ಕೆಲಸ ಮಾಡುತ್ತಿದ್ದೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT