ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.
‘ಕೇಜ್ರಿವಾಲ್ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಬಾರದು ಮತ್ತು ಮುಖ್ಯಮಂತ್ರಿ ಕಚೇರಿಯು ಅವರಿಗೆ ಯಾವುದೇ ಅಧಿಕೃತ ಜವಾಬ್ದಾರಿ ನೀಡಬಾರದು’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯನ್ ಅವರಿದ್ದ ಪೀಠವು ಆದೇಶಿಸಿದೆ.
‘ಎಲ್ಲ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಬಿಭವ್ ಅವರು ಮುಖ್ಯಮಂತ್ರಿಗಳ ನಿವಾಸಕ್ಕೂ ತೆರಳಬಾರದು’ ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
‘ಇದು ಸಣ್ಣ ಪುಟ್ಟ ಗಾಯಗಳ ಪ್ರಕರಣವಾಗಿದ್ದು, ಈ ವಿಷಯದಲ್ಲಿ ಜಾಮೀನು ವಿರೋಧಿಸಬಾರದು' ಎಂದು ದೆಹಲಿ ಪೊಲೀಸರ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಿಗೆ ನ್ಯಾಯಪೀಠ ಹೇಳಿತು.
ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಮೇ 13ರಂದು ಎಎಪಿಯ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಅವರ ಮೇಲೆ ಬಿಭವ್ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬಿಭವ್ ಅವರನ್ನು ಮೇ 18ರಂದು ಪೊಲೀಸರು ಬಂಧಿಸಿದ್ದರು.