ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಂತರ ಜಾಮೀನು ವಿಸ್ತರಣೆ: ಕೇಜ್ರಿವಾಲ್ ಅರ್ಜಿ ಸಿಜೆಐ ಮುಂದೆ

Published 28 ಮೇ 2024, 6:17 IST
Last Updated 28 ಮೇ 2024, 6:17 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಂತರ ಜಾಮೀನಿನ ಅವಧಿಯನ್ನು ಏಳು ದಿನಗಳವರೆಗೆ ವಿಸ್ತರಿಸಬೇಕು ಎಂದು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳುವ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ತೀರ್ಮಾನಿಸಲಿದ್ದಾರೆ.

ಕೇಜ್ರಿವಾಲ್ ಅವರ ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುವ ಪ್ರಕರಣಗಳ ಪಟ್ಟಿಗೆ ಸೇರಿಸಲು ರಜಾಕಾಲದ ಪೀಠವು ನಿರಾಕರಿಸಿತು. ನ್ಯಾಯಮೂರ್ತಿಗಳಾದ ಜೆ.ಕೆ. ಮಾಹೇಶ್ವರಿ ಮತ್ತು ಕೆ.ವಿ. ವಿಶ್ವನಾಥನ್ ಅವರು ಈ ಪೀಠದಲ್ಲಿ ಇದ್ದಾರೆ.

ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಪೀಠದಲ್ಲಿ ಇದ್ದ ನ್ಯಾಯಮೂರ್ತಿ ದೀಪಾಂಕರ್ ದತ್ತ ಅವರು ಹಿಂದಿನ ವಾರ ರಜಾಕಾಲದ ಪೀಠದಲ್ಲಿ ಇದ್ದಾಗ ಈ ಅರ್ಜಿಯನ್ನು ಪ್ರಸ್ತಾ‍ಪಿಸದೆ ಇದ್ದುದು ಏಕೆ ಎಂದು ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಸಿಂಘ್ವಿ ಅವರನ್ನು ಪೀಠವು ಮಂಗಳವಾರ ಪ್ರಶ್ನಿಸಿತು.

ವೈದ್ಯರು ಎರಡು ದಿನಗಳ ಹಿಂದಷ್ಟೇ ವೈದ್ಯಕೀಯ ಪರೀಕ್ಷೆಗಳ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ಈ ಅರ್ಜಿಯನ್ನು ನ್ಯಾಯಮೂರ್ತಿ ದತ್ತ ಅವರು ಇದ್ದ ರಜಾಕಾಲದ ಪೀಠದ ಎದುರು ಪ್ರಸ್ತಾಪಿಸಲು ಆಗಲಿಲ್ಲ ಎಂದು ಸಿಂಘ್ವಿ ಹೇಳಿದರು.

‘ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿದ ವಿಭಾಗೀಯ ಪೀಠವು, ಮುಖ್ಯ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿರುವ ಕಾರಣ, ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಲು ಕೋರಿರುವ ಅರ್ಜಿಯನ್ನು ಸಿಜೆಐ ಮುಂದೆ ಇರಿಸುವುದು ಸೂಕ್ತವಾಗುತ್ತದೆ’ ಎಂದು ಪೀಠವು ಮಂಗಳವಾರದ ಆದೇಶದಲ್ಲಿ ಹೇಳಿದೆ.

ತಾವು ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಿರುವ ಕಾರಣ, ಮಧ್ಯಂತರ ಜಾಮೀನಿನ ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಿ ಕೇಜ್ರಿವಾಲ್ ಅವರು ಅರ್ಜಿ ಸಲ್ಲಿಸಿದ್ದಾರೆ. ಜೂನ್‌ 2ರ ಬದಲು ಜೂನ್‌ 9ಕ್ಕೆ ಜೈಲಿಗೆ ಮರಳಲು ಅವಕಾಶ ಕಲ್ಪಿಸಬೇಕು ಎಂದು ಅವರು ಕೋರಿದ್ದಾರೆ.

ಪೂರಕ ದೋಷಾರೋಪ ಪಟ್ಟಿ: ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಅಬಕಾರಿ ನೀತಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಪೂರಕ ದೋಷಾರೋಪಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೇ ಎಂಬ ಕುರಿತ ಆದೇಶವನ್ನು ದೆಹಲಿಯ ನ್ಯಾಯಾಲಯವೊಂದು ಕಾಯ್ದಿರಿಸಿದೆ. ಆದೇಶವನ್ನು ಜೂನ್‌ 4ಕ್ಕೆ ನೀಡಲಿದೆ.

ಇ.ಡಿ ವಕೀಲರ ವಾದವನ್ನು ಆಲಿಸಿದ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಆದೇಶವನ್ನು ಕಾಯ್ದಿರಿಸಿದರು. ಕೇಜ್ರಿವಾಲ್ ಅವರ ವಿರುದ್ಧ ಕ್ರಮ ಜರುಗಿಸಲು ಅಗತ್ಯ ಪುರಾವೆಗಳು ಇವೆ ಎಂದು ಇ.ಡಿ. ಹೇಳಿದೆ. ದೋಷಾರೋಪ ಪಟ್ಟಿಯಲ್ಲಿ ಆಮ್ ಆದ್ಮಿ ಪಕ್ಷವನ್ನೂ ಆರೋಪಿ ಎಂದು ಹೆಸರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT