ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರ ಅವಧಿಯನ್ನು ತಲಾ ಒಂದು ವರ್ಷದ ಅವಧಿಗೆ ಎರಡು ಬಾರಿ ವಿಸ್ತರಿಸಿರುವುದು ಕಾನೂನುಬಾಹಿರ ಹಾಗೂ ಅಸಿಂಧು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮಿಶ್ರಾ ಅವರು ಈ ತಿಂಗಳ ಅಂತ್ಯದವರೆಗೆ ಈ ಹುದ್ದೆಯಲ್ಲಿ ಮುಂದುವರಿಯಬಹುದು. ಆಗಸ್ಟ್ 1ರೊಳಗೆ ನಿರ್ದೇಶನಾಲಯಕ್ಕೆ ಹೊಸ ಮುಖ್ಯಸ್ಥರನ್ನು ನೇಮಿಸಬೇಕು ಎಂದು ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮಿಶ್ರಾ ಅವರ ಅಧಿಕಾರದ ಅವಧಿ ಈ ವರ್ಷದ ನವೆಂಬರ್ 18ರ ವರೆಗೆ ಇತ್ತು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ.
ಆದರೆ, ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಕಾಯ್ದೆ 2021 ಹಾಗೂ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮನಾಥ್ ಹಾಗೂ ಸಂಜಯ್ ಕರೋಲ್ ಅವರನ್ನು ಒಳಗೊಂಡ ಪೀಠವು ತಿರಸ್ಕರಿಸಿದೆ. ಈ ಕಾಯ್ದೆಯು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಮುಖ್ಯಸ್ಥರ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಮಾಡಿಕೊಟ್ಟಿದೆ. ಶಾಸನಗಳಿಗೆ ತಿದ್ದುಪಡಿ ತರಲು ಶಾಸಕಾಂಗವು ಸಮರ್ಥವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಈ ಕ್ರಮದಲ್ಲಿ ಯಾವುದೇ ಅನಿಯಂತ್ರಿತತೆ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಕಂಡುಬಂದಿಲ್ಲ ಎಂದೂ 103 ಪುಟಗಳ ತೀರ್ಪಿನಲ್ಲಿ ಪೀಠ ಹೇಳಿದೆ.
ಮಿಶ್ರಾ ಅವರ ಅವಧಿಯನ್ನು ಒಂದು ವರ್ಷ ವಿಸ್ತರಿಸಿ 2021ರ ನವೆಂಬರ್ 17ರಂದು ಆದೇಶ ಹೊರಡಿಸಲಾಗಿತ್ತು. ಇದನ್ನು ನ್ಯಾಯಾಲಯ ಎತ್ತಿ ಹಿಡಿದಿತ್ತು. ಆದರೆ, ನಿವೃತ್ತಿ ನಂತರ ಯಾವುದೇ ಅಧಿಕಾರಿಯ ಸೇವೆಯನ್ನು ವಿಸ್ತರಿಸಲು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಅವಕಾಶ ಇದೆ ಎಂದು ಸ್ಪಷ್ಟಪಡಿಸಿತ್ತು. ನಂತರ 2022ರ ನವೆಂಬರ್ 17 ರಂದು ಮಿಶ್ರಾ ಅವರ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶ ಕಾನೂನುಬಾಹಿರ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಕಾಯ್ದೆಯ ತಿದ್ದುಪಡಿಗಳು ಸರ್ಕಾರಕ್ಕೆಇ.ಡಿ. ಮತ್ತು ಸಿಬಿಐ ನಿರ್ದೇಶಕರ ಅಧಿಕಾರವನ್ನು ವಿಸ್ತರಿಸಲು ಅನಿಯಂತ್ರಿತ ಅಧಿಕಾರ ನೀಡುತ್ತದೆ. ಆದರೆ, ಇದನ್ನು ಕೇವಲ ಸರ್ಕಾರದ ಇಚ್ಛೆಯಂತೆ ಮಾಡುವುದು ಸಾಧ್ಯವಿಲ್ಲ. ಈ ನಿರ್ಧಾರವನ್ನು ಈ ಅಧಿಕಾರಿಗಳ ನೇಮಕಕ್ಕೆ ರಚನೆಯಾಗಿರುವ ಸಮಿತಿ
ಗಳ ಶಿಫಾರಸುಗಳ ಆಧಾರದ ಮೇಲೆಮಾತ್ರ ಮಾಡಬಹುದು. ಅದೂ ಕೂಡಾ ಸಾರ್ವಜನಿಕ ಹಿತಾಸಕ್ತಿಯನ್ನು
ಒಳಗೊಂಡಿರಬೇಕು ಹಾಗೂ ಕಾರಣಗಳು ಲಿಖಿತವಾಗಿ ದಾಖಲಾಗಿರಬೇಕು ಎಂದು ನ್ಯಾಯಪೀಠ ಹೇಳಿದೆ.
ವಿಚಾರಣೆಯ ವೇಳೆ, ಕೇಂದ್ರ ಸರ್ಕಾರವು ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್‌ಫೋರ್ಸ್ (ಎಫ್‌ಎಟಿಎಫ್) ಈ ವರ್ಷದ ಹಣಕಾಸಿನ ಪರಿಶೀಲನೆ ನಡೆಸುತ್ತಿರುವ ಬಗ್ಗೆ ನ್ಯಾಯಪೀಠ ಗಮನ ಸೆಳೆಯಿತು. ಇದನ್ನು ಪರಿಗಣಿಸಿದ ನ್ಯಾಯಪೀಠ, ಇ.ಡಿ.ಯ ಹೊಸ ನಿರ್ದೇಶಕರ ನೇಮಕಾತಿ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾಗುವುದರಿಂದ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಜುಲೈ 31ರ ವರೆಗೆ ಮಿಶ್ರಾ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅನುಮತಿ ನೀಡಲಾಗುವುದು ಎಂದು ತಿಳಿಸಿತು.
ಸುಪ್ರೀಂ ಕೋರ್ಟ್‌ನ ನಿರ್ಧಾರಕ್ಕೆ ಸಂತಸ ಪಡುತ್ತಿರುವವರು ಒಂದು ರೀತಿಯಲ್ಲಿ ಭ್ರಮೆಯಲ್ಲಿ ಇದ್ದಾರೆ. ಏಕೆಂದರೆ ಸಂಸತ್ ಇತ್ತೀಚೆಗೆ ಜಾರಿಗೊಳಿಸಿದ್ದ ಸಿವಿಸಿ ಕಾಯ್ದೆಯ ತಿದ್ದುಪಡಿಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಭ್ರಷ್ಟರು ಮತ್ತು ತಪ್ಪು ಕೆಲಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ನಿರ್ದೇಶನಾಲಯದ ಅಧಿಕಾರ ವ್ಯಾಪ್ತಿಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಇ.ಡಿ. ಒಂದು ಸಂಸ್ಥೆಯಾಗಿದ್ದು ಅದು ಯಾವುದೇ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ ಮತ್ತು ತನ್ನ ಮೂಲ ಉದ್ದೇಶದತ್ತ ಗಮನ ಕೇಂದ್ರೀಕರಿಸಿದೆ.– ಅಮಿತ್ ಶಾ, ಕೇಂದ್ರ ಗೃಹ ಸಚಿವ
ಇ.ಡಿ. ಮುಖ್ಯಸ್ಥರ ಅಧಿಕಾರ ಅವಧಿಯನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡರಾದ ಜಯಾ ಠಾಕೂರ್, ರಣದೀಪ್ ಸಿಂಗ್ ಸುರ್ಜೆವಾಲಾ, ಟಿಎಂಸಿ ಮುಖಂಡರಾದ ಸಾಕೇತ್ ಗೋಖಲೆ, ಮಹುವಾ ಮೊಯಿತ್ರಾ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ. ಇದು ನ್ಯಾಯದ ಗೆಲುವು. ಇ.ಡಿ.ಯನ್ನು ರಾಜಕೀಯ ಉದ್ದೇಶಕ್ಕೆ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ನಮ್ಮ ಪಕ್ಷ ಮೊದಲಿನಿಂದಲೂ ಆರೋಪಿಸುತ್ತಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಅದು ಈಗ ಸ್ಪಷ್ಟವಾಗಿದೆ. ಮಿಶ್ರಾ ಅವರ ಅವಧಿ ಮೂರನೇ ಬಾರಿಗೆ ವಿಸ್ತರಣೆಯಾದ ಬಳಿಕ (2021ರ ನವೆಂಬರ್ 17) ನಿರ್ದೇಶನಾಲಯವು ಕೈಗೊಂಡ ಎಲ್ಲ ಕ್ರಮಗಳ ಪರಿಶೀಲನೆಗೆ ಸ್ವತಂತ್ರ ತನಿಖೆ ನಡೆಸಬೇಕು.– ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.