ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಯಾತ್ರೆ | ತೆಲಂಗಾಣ: ಕರ್ನಾಟಕದ ಗ್ಯಾರಂಟಿಗಳ ಮಾರ್ದನಿ...

Published 26 ನವೆಂಬರ್ 2023, 0:30 IST
Last Updated 26 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಹೈದರಾಬಾದ್‌: ಅದು ಪುಟ್ಟ ಚಹಾ ಅಂಗಡಿ. ಪಾತ್ರೆಯಲ್ಲಿ ಚಹಾ ಕುದಿಯುತ್ತಿತ್ತು. ಬೆಂಚ್‌ ಮೇಲೆ ಕುಳಿತಿದ್ದ ಭೀಮಾಬಾಯಿ ಹಾಗೂ ಪ್ರತಾಪ್‌ ಅವರ ನಡುವಿನ ಚರ್ಚೆ ಬಿಸಿಯಾಗಿತ್ತು. ನಾನು ಪ್ರೇಕ್ಷಕನಾಗಿದ್ದೆ. ಕಾರಣ ಇಷ್ಟೆ: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ ಎಂದು ಭೀಮಾಬಾಯಿ ಹೇಳಿದರು. ಇದನ್ನು ಪ್ರತಾಪ್‌ ಅಲ್ಲಗಳೆದರು. ವಾದ–ಪ್ರತಿವಾದ, ಆರೋಪ, ಪ್ರತ್ಯಾರೋಪ ಜೋರಾಯಿತು. ಅಲ್ಲಿದ್ದ ಮತ್ತೊಬ್ಬರು ನನ್ನನ್ನು ಉದ್ದೇಶಿಸಿ, ‘ಕರ್ನಾಟಕವಾಳ್ಳು ಅಂಟಾರು, ಮೀರೆ ಚೆಪ್ಪಂಡಿ’ ಎಂದರು. ಅಷ್ಟರಲ್ಲಿ ಭೀಮಾಬಾಯಿ ‘ಅವರೇನು ಹೇಳುವುದು, ನಾನು ಕಲಬುರಗಿಯ ಚಿತ್ತಾಪುರದವಳು. ನನಗೆ ಎಲ್ಲ ಗೊತ್ತಿದೆ. ಬಸ್‌ ಫ್ರೀ, ಕರೆಂಟ್‌ ಫ್ರೀ, ಅಕ್ಕಿ ಜೊತೆಗೆ 75 ರೂಪಾಯಿ, 2 ಸಾವಿರ ರೂಪಾಯಿ...’ ಒಂದೊಂದೇ ಬೆರಳುಗಳನ್ನು ಮಡಚುತ್ತಾ ಪಟ್ಟಿ ಕೊಟ್ಟರು. ಇದರಿಂದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದ ಅಭಿಮಾನಿ ಪ್ರತಾಪ್‌ ತಣ್ಣಗಾದರು. ಭೀಮಾಬಾಯಿ ಗೆಲುವಿನ ನಗೆ ಬೀರಿ, ಬೀದರ್‌ನ ಶರಣಪ್ಪನ ಕಡೆಗೆ ತಿರುಗಿ, ‘ನಿಮಗೂ ಗೊತ್ತಿದೆ ಅಲ್ವಾ ಹೇಳಿ’ ಎಂದು ಅವರನ್ನೂ ತಮ್ಮ ಬೆಂಬಲಕ್ಕೆ ಎಳೆದುಕೊಂಡರು. ಅವರು ಬಿಆರ್‌ಎಸ್‌ ಕುರಿತು ಒಲವು ವ್ಯಕ್ತಪಡಿಸುತ್ತಾ, ಒಲ್ಲದ ಮನಸ್ಸಿನಿಂದಲೇ ‘ಹೌದು’ ಎಂದು ತಲೆ ಆಡಿಸಿದರು. ಭೀಮಾಬಾಯಿ ಗೋದಾಮಿನಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಪ್ರತಾಪ್‌ ಹಾಗೂ ಶರಣಪ್ಪ ಅವರದು ಟೈಲರಿಂಗ್‌ ಉದ್ಯೋಗ. ಇದಿಷ್ಟು ನಡೆದಿದ್ದು ಹೈದರಾಬಾದ್‌–ಪುಣೆ ಹೆದ್ದಾರಿಯಲ್ಲಿರುವ ಇಸ್ನಾಪುರದಲ್ಲಿ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಚುನಾವಣೆ ವೇಳೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. 135 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿತು. ಇದಕ್ಕೆ ಗ್ಯಾರಂಟಿಗಳೇ ಕಾರಣ ಎನ್ನುವುದು ಕಾಂಗ್ರೆಸ್‌, ವಿರೋಧ ಪಕ್ಷಗಳು ಹಾಗೂ ಜನರ ಬಲವಾದ ನಂಬಿಕೆ.

ತೆಲಂಗಾಣ ಕಾಂಗ್ರೆಸ್‌ ಆರು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಜನರು ಗ್ಯಾರಂಟಿಗಳ ಬಗೆಗೆ ವಿಚಾರಿಸುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾರಿಗೆ ತರುತ್ತದೆ ಎನ್ನುವ ನಂಬಿಕೆ ಬಲಿಯತೊಡಗಿದೆ. ಇದು ಬಿಆರ್‌ಎಸ್‌ನ ತಳಮಳವನ್ನು ಹೆಚ್ಚು ಮಾಡಿದೆ. ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಗ್ಯಾರಂಟಿಗಳ ಕುರಿತು ಪ್ರಸ್ತಾಪಿಸಿದರೆ ಸಾಕು, ಬಿಆರ್‌ಎಸ್‌ನವರು ಕೆಂಡಾಮಂಡಲವಾಗುತ್ತಾರೆ. ಇದರ ‘ಪ್ರಭಾವ’ವನ್ನು ತಗ್ಗಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಹಾಗೂ ಅವರ ಪುತ್ರ, ಸಚಿವ ಕೆ.ಟಿ.ರಾಮರಾವ್‌ ನಿತ್ಯ ಪ್ರತಿದಾಳಿ ನಡೆಸುತ್ತಿದ್ದಾರೆ. ‘ಕರ್ನಾಟಕದಲ್ಲಿ ಗ್ಯಾರಂಟಿಗಳು ಸರಿಯಾಗಿ ಜಾರಿ ಆಗಿಲ್ಲ. ಫಲಾನುಭವಿಗಳಿಗೆ ತಲುಪುತ್ತಿಲ್ಲ’ ಎಂದು ಅಬ್ಬರಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಗಡಿಯಲ್ಲಿರುವ ನಾರಾಯಣಪೇಟ ಜಿಲ್ಲೆಯ ಕೋಡಂಗಲ್‌ (ಟಿಪಿಸಿಸಿ ಅಧ್ಯಕ್ಷ ರೇವಂತ ರೆಡ್ಡಿ ಸ್ಪರ್ಧಿಸಿರುವ ಕ್ಷೇತ್ರ) ನಲ್ಲಿ ಈಚೆಗೆ ಕರ್ನಾಟಕದ ಕೆಲ ರೈತರು ‘ಕರ್ನಾಟಕ ಸರ್ಕಾರ ಸುಳ್ಳು ಹೇಳುತ್ತಿದೆ. ರೈತರಿಗೆ ದಿನಕ್ಕೆ ಐದು ಗಂಟೆ ಮಾತ್ರ ವಿದ್ಯುತ್ ಕೊಡುತ್ತಿದೆ. ಗ್ಯಾರಂಟಿಗಳು ಸರಿಯಾಗಿ ಫಲಾನುಭವಿಗಳಿಗೆ ಸಿಕ್ಕಿಲ್ಲ’ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದರು. ಇದರ ಹಿಂದೆ ಬಿಆರ್‌ಎಸ್‌ನ ಕೈವಾಡವಿತ್ತು ಎನ್ನುವುದು ಕಾಂಗ್ರೆಸ್‌ನ ದೂರು.

ಇಂಥ ಆರೋಪಗಳಿಗೆ ಉತ್ತರ ಎನ್ನುವಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಕಾಮಾರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಚಾರಸಭೆಯಲ್ಲಿ ಕೆ.ಚಂದ್ರಶೇಖರ ರಾವ್‌ಗೆ ತಿರುಗೇಟು ನೀಡಿ, ಗ್ಯಾರಂಟಿಗಳ ಅನುಷ್ಠಾನ ಕುರಿತು ತಿಳಿದುಕೊಳ್ಳಲು ಕರ್ನಾಟಕಕ್ಕೆ ಬರುವಂತೆ ಪಂಥಾಹ್ವಾನ ನೀಡಿದರು.

ಸಂಗಾರೆಡ್ಡಿ ನಗರದಲ್ಲಿ ಸಿಕ್ಕ ಬಿಆರ್‌ಎಸ್‌ ಕಾರ್ಯಕರ್ತ ರವಿಶಂಕರ್‌, ಗ್ಯಾರಂಟಿಗಳ ಬಗೆಗೆ ಮಾತನಾಡುತ್ತಾ, ‘200 ಯೂನಿಟ್‌ ವಿದ್ಯುತ್ ಉಚಿತ ಎನ್ನುತ್ತಾರೆ, 24 ಗಂಟೆಯೂ ವಿದ್ಯುತ್ ಕೊಡ್ತಾ ಇದ್ದಾರಾ? 50 ಯೂನಿಟ್‌ ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ನಾವು 24 ಗಂಟೆ ವಿದ್ಯುತ್‌ ಕೊಡುತ್ತಿದ್ದೇವೆ’ ಎಂದು ಒತ್ತಿ ಒತ್ತಿ ಹೇಳಿದರು. ಅವರ ಜೊತೆಗಿದ್ದ ವೆಂಕಟೇಶ್‌, ‘ನಮ್ಮ ರೈತ ಬಂಧು, ದಲಿತ ಬಂಧು, ವೃದ್ಧರು, ಅಶಕ್ತರಿಗೆ ಪಿಂಚಣಿ, ಶಾದಿ ಮುಬಾರಕ್‌ನಂತಹ ಹತ್ತಾರು ಯೋಜನೆಗಳು ಕರ್ನಾಟಕದ ಗ್ಯಾರಂಟಿಗಳಿಂತ ಉತ್ತಮವಾಗಿವೆ’ ಎಂದು ಅಭಿಮಾನದಿಂದ ಹೇಳಿದರು.

ಐದು ದಿನಗಳ ಹಿಂದೆ ಕರ್ನಾಟಕದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ರೈತರು ಇಲ್ಲಿನ ಇಂದಿರಾ ಪಾರ್ಕ್‌ನಲ್ಲಿ ಧರಣಿ ನಡೆಸಿದ್ದರು. ‘ಕಾಂಗ್ರೆಸ್‌, ಕರ್ನಾಟಕದಲ್ಲಿ ಗ್ಯಾರಂಟಿಗಳನ್ನು ಪೂರ್ತಿಯಾಗಿ ಅನುಷ್ಠಾನಗೊಳಿಸಿಲ್ಲ. ಆದ್ದರಿಂದ ತೆಲಂಗಾಣದವರು ಕಾಂಗ್ರೆಸ್‌ನ ಹುಸಿ ಭರವಸೆಗಳಿಗೆ ಮೋಸ ಹೋಗಬೇಡಿ, ಎಚ್ಚರಿಕೆಯಿಂದ ಮತ ಚಲಾಯಿಸಿ’ ಎಂದು ಕರೆ ನೀಡಿದರು. ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ ಮುಶೀರಾಬಾದ್‌ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ‘ನೀವು ಕಾಂಗ್ರೆಸ್‌ ವಿರುದ್ಧ ರಾಜಕೀಯ ಮಾಡುವ ಬದಲು, ಬಿಆರ್‌ಎಸ್‌ ಪರವಾಗಿಯೇ ಮತ ಕೇಳಿ’ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಕಾಂಗ್ರೆಸ್‌ನವರು ತಮ್ಮ ‘ಗ್ಯಾರಂಟಿ’ಗಳೇ ಮೇಲು ಎಂದು ಬೀಗಿದರೆ, ಬಿಆರ್‌ಎಸ್‌ನವರು ತಮ್ಮ ‘ಬಂಧು ಯೋಜನೆ’ಗಳು ಅದ್ಭುತ ಎಂದು ವಾಗ್ವಾದಕ್ಕೆ ಇಳಿಯುತ್ತಿದ್ದರು. ಇದು ಗ್ಯಾರಂಟಿ V/S ಗ್ಯಾರಂಟಿಯಂತೆ ತೋರುತ್ತಿತ್ತು.

ಜಹೀರಾಬಾದ್‌ ನಗರ ಕಲಬುರಗಿ ಮತ್ತು ಬೀದರ್‌ ಜಿಲ್ಲೆಗಳ ಗಡಿ ಹಂಚಿಕೊಂಡಿದೆ. ಹೈದರಾಬಾದ್‌ನಿಂದ ಜಹೀರಾಬಾದ್‌ಗೆ 115 ಕಿಲೊಮೀಟರ್‌. ಈ ಹೆದ್ದಾರಿಯಲ್ಲಿ ಸಾಗುವಾಗ ಕೆಲವು ಕಡೆ ಬಸವಣ್ಣನ ಪ್ರತಿಮೆಗಳು ಕಾಣಸಿಗುತ್ತವೆ. ಇದು ಎರಡೂ ರಾಜ್ಯಗಳ ನಡುವಿನ ನಂಟಿನ ಸಂಕೇತದಂತಿದೆ. ಜಹೀರಾಬಾದ್‌ನ ಪಾನ್‌ಶಾಪ್‌ನ ಸಯ್ಯದ್‌ ಶೋಯಬ್‌, ‘ಗ್ಯಾರಂಟಿಗಳ ಬಗ್ಗೆ ನನಗೂ ಗೊತ್ತು. ಬೀದರ್‌ನಲ್ಲಿ ನಮಗೆ ಸಂಬಂಧಿಕರು ಇದ್ದಾರೆ. ಅವರು ಹೇಳುವುದನ್ನು ಕೇಳಿದ್ದೇನೆ’ ಎಂದು ಹೇಳಿದರು.

ನಾಲ್ಕು ದಿನಗಳಲ್ಲಿ ಸುಮಾರು ಒಂದು ಸಾವಿರ ಕಿಲೊಮೀಟರ್‌ಗಳಷ್ಟು ಸುತ್ತಾಡಿದ್ದೇನೆ. ನೂರಾರು ಜನರೊಂದಿಗೆ ಸಂಭಾಷಿಸಿದ್ದೇನೆ. ಈ ಅನುಭವದ ಆಧಾರದ ಮೇಲೆ ಹೇಳುವುದಾದರೆ ಕರ್ನಾಟಕದ ಗ್ಯಾರಂಟಿಗಳು ಗಡಿ ದಾಟಿ ತೆಲಂಗಾಣದಲ್ಲಿ ಮಾರ್ದನಿಸುತ್ತಿವೆ. ಎಷ್ಟೋ ಕಡೆ ಗ್ಯಾರಂಟಿಗಳ ಕುರಿತಾದ ಪ್ರಶ್ನೆ ಕೇಳಿದ ಕಾರಣಕ್ಕಾಗಿ ಇಕ್ಕಟ್ಟಿಗೆ ಸಿಲುಕುವಂತಾಗುತ್ತಿತ್ತು. ಇದನ್ನು ಜಾವೇದ್‌ ಗುರುತಿಸಿದ್ದ. ಜಾವೇದ್‌, ಬೀದರ್‌ ಜಿಲ್ಲೆಯ ಹುಮನಾಬಾದ್‌ ಸಮೀಪದ ಹಳ್ಳಿಯೊಂದರ ಹುಡುಗ. ನನ್ನ ಕಾರು ಚಾಲಕ. ಈತ ಹೇಳಿದ ‘ನೀವು ನಾಲ್ಕು ದಿನಕ್ಕೇ ವಿವರಣೆ ಕೊಟ್ಟು ಸಾಕಾಗಿದೆ ಅಂತಿದ್ದೀರ. ನಾನು ಕರ್ನಾಟಕದವನು ಅಂಥ ಕಸ್ಟಮರ್‌ಗಳಿಗೆ ಗೊತ್ತಾದ ಕೂಡಲೇ ಮೊದಲು ಕೇಳುವುದು ಗ್ಯಾರಂಟಿಗಳ ಬಗೆಗೇ. ಎಲೆಕ್ಷನ್‌ ಚಾಲೂ ಆದ ದಿನದಿಂದ ಹೈರಾಣಾಗಿ ಹೋಗಿದ್ದೇನೆ’ ಎಂದು ನಕ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT