ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾರತಮ್ಯ ಮಾಡಲಾಗುತ್ತಿದೆ: ಕೆಸಿಆರ್‌ ವಿರುದ್ಧ ತೆಲಂಗಾಣ ರಾಜ್ಯಪಾಲರ ಆರೋಪ

Last Updated 8 ಸೆಪ್ಟೆಂಬರ್ 2022, 9:43 IST
ಅಕ್ಷರ ಗಾತ್ರ

ಹೈದರಾಬಾದ್: ‘ಮಹಿಳಾ ರಾಜ್ಯಪಾಲರ ವಿಚಾರದಲ್ಲಿ ಹೇಗೆ ತಾರತಮ್ಯ ಮಾಡುವುದು’ ಎಂಬುದರಲ್ಲಿ ತೆಲಂಗಾಣ ಸರ್ಕಾರ ಹೊಸ ಇತಿಹಾಸ ಬರೆಯುತ್ತಿದೆ ಎಂದು ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅಸಮಾಧಾನ ಹೊರಹಾಕಿದ್ದಾರೆ.

ತೆಲಂಗಾಣ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ ಮೂರು ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮಿಳಿಸೈ ಅವರು ಮಾತನಾಡಿದ್ದಾರೆ.

‘ಸ್ವಾತಂತ್ರ್ಯೋತ್ಸವದಂದು ನನಗೆ ಭಾಷಣ ಮತ್ತು ಧ್ವಜಾರೋಹಣ ನೆರವೇರಿಸಲು ನಿರಾಕರಿಸಲಾಗಿತ್ತು. ಈಗಲೂ ನಾನು ಎಲ್ಲಿಗೆ ಹೋದರೂ, ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ರಾಜ್ಯ ಸರ್ಕಾರ ಶಿಷ್ಟಾಚಾರವನ್ನು ಅನುಸರಿಸುತ್ತಿಲ್ಲ’ ಎಂದು ತಮಿಳಿಸೈ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಪಾಲರ ಕಚೇರಿಯನ್ನು ಗೌರವಿಸುವುದನ್ನು ಸರ್ಕಾರ ಅರಿತುಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ಆದೇಶಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ತಮಿಳಿಸೈ ತಿಳಿಸಿದ್ದಾರೆ.

ಸುಗಮ ಆಡಳಿತ ನಡೆಸಲು ಎಷ್ಟೇ ಅಡೆತಡೆಗಳು ಎದುರಾದರೂ ನಿರ್ಮಲ ಮನಸ್ಸಿನಿಂದ ಎಲ್ಲವನ್ನೂ ಸ್ವೀಕರಿಸುತ್ತೇನೆ ಎಂದು ತಮಿಳಿಸೈ ಹೇಳಿದ್ದಾರೆ.

ಆ.15ರಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಆಯೋಜಿಸಿದ್ದ ‘ಅಟ್ ಹೋಮ್’ (ಔತಣಕೂಟ) ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಶಿಷ್ಟಾಚಾರದಂತೆ ‘ಅಟ್ ಹೋಮ್’ ಕಾರ್ಯಕ್ರಮಕ್ಕೆ ಕೆಸಿಆರ್‌ ಅವರಿಗೆ ಆಹ್ವಾನಿಸಲಾಗಿತ್ತು.‌ ಆದರೆ, ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಇದರೊಂದಿಗೆ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ನಡುವಿನ ಭಿನ್ನಾಭಿಪ್ರಾಯ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಕಳೆದ ವರ್ಷವೂ ರಾಜ್ಯಪಾಲರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕೆಸಿಆರ್ ಗೈರಾಗಿದ್ದರು. ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವಿನ ಸಂಬಂಧ ಸೌಹಾರ್ದಯುತವಾಗಿಲ್ಲ. ಹಾಗಾಗಿ ರಾಜ್ಯ ಸರ್ಕಾರವು ಶಿಷ್ಟಾಚಾರವನ್ನು ಪಾಲಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿಎಂಒ ಮತ್ತು ರಾಜಭವನದ ನಡುವಿನ ಸಂಬಂಧಗಳು ಸೌಹಾರ್ದಯುತವಾಗಿದ್ದಾಗ ಕೆಸಿಆರ್ 2020ರವರೆಗೆ ರಾಜ್ಯಪಾಲರ ‘ಅಟ್ ಹೋಮ್’ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಎರಡು ಕಚೇರಿಗಳ ನಡುವಿನ ವಿವಾದಗಳು ಬಗೆಹರಿಯದಿದ್ದರೂ, ಜೂನ್‌ನಲ್ಲಿ ರಾಜಭವನದಲ್ಲಿ ನಡೆದ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಉಜ್ಜಲ್‌ ಭುಯನ್‌ ಅವರ ಪ್ರಮಾಣವಚನ ಸಮಾರಂಭದಲ್ಲಿ ಸಿಎಂ ಭಾಗವಹಿಸಿದ್ದರು.

ಓದಿ...ತೆಲಂಗಾಣ: ರಾಜ್ಯಪಾಲರ ಔತಣಕೂಟಕ್ಕೆ ಕೆಸಿಆರ್‌ ಗೈರು‌, ರಾಜಕೀಯ ವಲಯದಲ್ಲಿ ಚರ್ಚೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT