ಊಟಿ: ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ಊಟಿಯಲ್ಲಿ ತಾಪಮಾನ 1.3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಹಿಮ ಆವರಿಸಿಕೊಂಡಿದೆ. ಪರಿಣಾಮ ಊಟಿ ಗಿರಿಧಾಮ ಮಿನಿ ಕಾಶ್ಮೀರವಾಗಿ ಬದಲಾಗಿದೆ.
ತಾಪಮಾನ ಇಳಿಕೆಯಿಂದ ಚಳಿ ಹೆಚ್ಚಾಗಿದ್ದು, ಜನರು ಅಗ್ಗಿಷ್ಟಿಕೆಯ ಮೊರೆ ಹೋಗಿದ್ದಾರೆ.
ನೀಲಗಿರಿ ಜಿಲ್ಲೆಯಲ್ಲಿ ಪ್ರತಿ ವರ್ಷ ನವೆಂಬರ್‌ನಿಂದ ಫೆಬ್ರುವರಿವರೆಗೆ ಹಿಮ ಬೀಳುತ್ತದೆ. ಆದರೆ ಈ ವರ್ಷ ಚಂಡಮಾರುತ ಮತ್ತು ಮಳೆಯಿಂದಾಗಿ ಜನವರಿಯಲ್ಲಿ ಹಿಮ ಬೀಳಲು ಆರಂಭವಾಗಿದೆ.
ಭಾನುವಾರ ಊಟಿ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಾದ ಕಾಂತಲ್, ಪಿಂಕರ್ ಪೋಸ್ಟ್ ಮತ್ತು ತಲೈ ಕುಂಟಾ ಪ್ರದೇಶ ಹಿಮದಿಂದ ಆವೃತವಾಗಿತ್ತು. ಹುಲ್ಲುಹಾಸಿನ ಮೇಲೆ ಹೆಪ್ಪುಗಟ್ಟಿದ ನೀರಿನ ಹನಿಗಳು ಹೊಸ ಲೋಕವನ್ನೇ ಸೃಷ್ಟಿಸಿತ್ತು.
ಕೆಲವು ಕಡೆ ನಿಲ್ಲಿಸಿದ್ದ ವಾಹನಗಳ ಮೇಲೆ ಒಂದು ಇಂಚಿನವರೆಗೂ ಹಿಮ ಆವರಿಸಿತ್ತು. ತಮಿಳುನಾಡಿನ ಎತ್ತರದ ಪ್ರದೇಶದಲ್ಲಿರುವ ಗ್ರಾಮದಲ್ಲಿ ವಿಪರೀತ ಚಳಿ, ಕಡಿಮೆ ತಾಪಮಾನಕ್ಕೆ ಒಗ್ಗಿಕೊಳ್ಳದ ಸ್ಥಳೀಯರು ಮನೆಯೊಳಗೇ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ.