ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಅಧಿವೇಶನ | ಅದಾನಿ ಪ್ರಕರಣ: ಸೆಬಿ ತನಿಖೆಗೆ ಆಗ್ರಹ

ಸರ್ವಪಕ್ಷ ಸಭೆ; ರಾಜ್ಯಪಾಲರ ನಡೆ ಬಗ್ಗೆ ಚರ್ಚೆಗೆ ಪಟ್ಟು
Last Updated 30 ಜನವರಿ 2023, 19:51 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಷೇರುಗಳ ಮೌಲ್ಯವನ್ನು ಕೃತಕವಾಗಿ ಏರಿಕೆ–ಇಳಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಅದಾನಿ ಸಮೂಹವನ್ನು ‘ಸೆಬಿ’ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಪಕ್ಷಗಳು ಸೋಮವಾರ ಆಗ್ರಹಿಸಿವೆ. ಕಾನೂನಿನ ಅಡಿಯಲ್ಲಿ ಸಾಧ್ಯವಿರುವ ಎಲ್ಲ ವಿಚಾರಗಳ ಚರ್ಚೆಗೆ ಅವಕಾಶವಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.

ಬಜೆಟ್ ಅಧಿವೇಶಕ್ಕೂ ಮುನ್ನ, ಸಂಸದೀಯ ವ್ಯವಹಾರಗಳ ಸಚಿವಾಲಯ ಸೋಮವಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಅದಾನಿ ಸಮೂಹದ ಮೇಲೆ ಇರುವ ಅಕ್ರಮ ಆರೋಪ, ರಾಜ್ಯಪಾಲರ ನಡೆ ಹಾಗೂ ಇತರ ವಿಚಾರಗಳನ್ನು ಪ್ರತಿಪಕ್ಷಗಳು
ಪ್ರಸ್ತಾಪಿಸಿದವು.

ಅದಾನಿ ಸಮೂಹವು ಷೇರು ಮಾರುಕಟ್ಟೆಯಲ್ಲಿ ಹಾಗೂ ಉದ್ಯಮದಲ್ಲಿ ಅವ್ಯವಹಾರ ನಡೆಸಿದೆ ಎಂಬುದಾಗಿ ‘ಹಿಂಡನ್‌ಬರ್ಗ್ ರಿಸರ್ಚ್‌’ ಸಂಸ್ಥೆ ತನ್ನ ವರದಿಯಲ್ಲಿ ಆರೋಪಿಸಿದ್ದು, ಅದಾನಿ ಕಂಪನಿಗಳಲ್ಲಿ ಎಸ್‌ಬಿಐ ಹಾಗೂ ಎಲ್‌ಐಸಿ ಮಾಡಿರುವ ಹೂಡಿಕೆಯ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಆಗ್ರಹಿಸಿದವು.

ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ಹಸ್ತಕ್ಷೇಪ ನಡೆಸುತ್ತಿದ್ದು, ಅವರು ರಾಜಕೀಯಕ್ಕೆ ಇಳಿದಿದ್ದಾರೆ ಎಂದು ರಾಜ್ಯಸಭೆಯಲ್ಲಿ ಶಿವಸೇನಾ ಉಪನಾಯಕಿ ಪ್ರಿಯಾಂಕಾ ಚತುರ್ವೇದಿ ಆರೋಪಿಸಿದರು. ಬಿಆರ್‌ಎಸ್ ಹಾಗೂ ಡಿಎಂಕೆ ಇದಕ್ಕೆ ದನಿಗೂಡಿಸಿದವು. ದೇಶದಾದ್ಯಂತ ಜಾತಿ ಆಧಾರಿತ ಆರ್ಥಿಕ ಗಣತಿ ನಡೆಸುವಂತೆ ವೈಎಸ್‌ಆರ್‌ಸಿ ಆಗ್ರಹಿಸಿತು. ಟಿಆರ್‌ಎಸ್, ಟಿಎಂಸಿ, ಬಿಜೆಡಿ ಇದನ್ನು ಬೆಂಬಲಿಸಿದವು. ಬಿಬಿಸಿ ಸಾಕ್ಷ್ಚಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದ ಕೇಂದ್ರದ ನಡೆಯ ಬಗ್ಗೆ ಚರ್ಚೆಗೆ ಟಿಎಂಸಿ ಒತ್ತಾಯಿಸಿದೆ.

ರಾಜ್ಯಗಳಿಗೆ ಆದಾಯ ಹಂಚಿಕೆಯಲ್ಲಿ ತಾರತಮ್ಯ, ಹಣದುಬ್ಬರ, ನಿರುದ್ಯೋಗ ವಿಚಾರಗಳನ್ನು ಪ್ರಸ್ತಾಪಿಸುವ ಸುಳಿವನ್ನು ಪ್ರಾದೇಶಿಕ ಪಕ್ಷಗಳು ನೀಡಿದವು. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಟಿಎಂಸಿ ಸೇರಿದಂತೆ ಹಲವು ಪಕ್ಷಗಳು ಆಗ್ರಹಿಸಿದವು.

‘ಸಂಸತ್ ಕಲಾಪ ಸುಗಮವಾಗಿ ಸಾಗಲು ಪ್ರತಿಪಕ್ಷಗಳ ಸಹಕಾರ ಅಗತ್ಯ. ಕಾನೂನಿನ ಅಡಿಯಲ್ಲಿ ಎಲ್ಲ ವಿಚಾರಗಳ ಚರ್ಚೆಗೆ ಸರ್ಕಾರ ಸಿದ್ಧ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ ಅವರು ಹೇಳಿದರು. 27 ಪಕ್ಷಗಳ 37 ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.

ಸರ್ಕಾರದ ಹಲವು ನಡೆಗಳನ್ನು ಖಂಡಿಸಿ, ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸುವ ಬಗ್ಗೆ ಬಿಆರ್‌ಎಸ್ ಪಕ್ಷವು ಇತರ ಪಕ್ಷಗಳ ಜೊತೆ ಸಮಾಲೋಚನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಧಿವೇಶನ ಇಂದಿನಿಂದ

l ಸಂಸತ್ತಿನ ಬಜೆಟ್‌ ಅಧಿವೇಶನವು ಮಂಗಳವಾರ ಆರಂಭವಾಗಲಿದ್ದು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ

l ರಾಷ್ಟ್ರಪತಿ ಭಾಷಣದ ನಂತರ ಆರ್ಥಿಕ ಸಮೀಕ್ಷೆ ಮಂಡನೆ

l ಫೆ.1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುವ ಕೊನೆಯ ಪೂರ್ಣಪ್ರಮಾಣದ ಬಜೆಟ್‌ ಇದಾಗಿದೆ

l ಬಜೆಟ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರ 36 ಮಸೂದೆಗಳನ್ನು ಮಂಡಿಸಲು ಉದ್ದೇಶಿಸಿದೆ

l ಎರಡು ಭಾಗಗಳಲ್ಲಿ ಬಜೆಟ್‌ ಅಧಿವೇಶನವು ನಡೆಯಲಿದೆ. ಮೊದಲ ಭಾಗವು ಫೆ. 14ಕ್ಕೆ ಪೂರ್ಣಗೊಳ್ಳಲಿದೆ. ಎರಡನೇ ಭಾಗವು ಮಾರ್ಚ್‌ 12ಕ್ಕೆ ಆರಂಭವಾಗಿ ಏಪ್ರಿಲ್‌ 6ಕ್ಕೆ ಕೊನೆಗೊಳ್ಳಲಿದೆ

ಸಿರಿಧಾನ್ಯಗಳ ಸವಿ

ತರಕಾರಿ ಹಾಕಿದ ಜೋಳದ ಉಪ್ಪಿಟ್ಟು, ರಾಗಿ ದೋಸೆ, ಸಜ್ಜೆಯಿಂದ ಮಾಡಿದ ಟಿಕ್ಕಿ, ಸಜ್ಜೆ ಕಿಚಡಿ– ಇವು ಬಜೆಟ್‌ ಅಧಿವೇಶನದ ರುಚಿ ಹೆಚ್ಚಿಸಲಿವೆ!

ವಿವಿಧ ರಾಜ್ಯಗಳಲ್ಲಿ ಸಿರಿಧಾನ್ಯಗಳಿಂದ ಮಾಡುವ ವಿಶೇಷ ಪದಾರ್ಥಗಳ ಸವಿಯನ್ನು ಸಂಸದರು, ಸಿಬ್ಬಂದಿ ಹಾಗೂ ವೀಕ್ಷಕರು ಈ ಬಾರಿಯ ಅಧಿವೇಶನದಲ್ಲಿ ಸವಿಯಲಿದ್ದಾರೆ.

ಕೇಂದ್ರವು ಸಿರಿಧಾನ್ಯಗಳ ಬಳಕೆಗೆ ಒತ್ತು ನೀಡಿದೆ. ಇದೇ ಕಾರಣಕ್ಕೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು, ಈ ಬಾರಿ ರಾಗಿ, ಜೋಳ, ಸಜ್ಜೆ, ರಾಜಗಿರಿ ಮುಂತಾದ ಸಿರಿಧಾನ್ಯ ಗಳಿಂದಲೇ ತಿನಿಸುಗಳನ್ನು ಮಾಡಬೇಕು ಎಂದಿದ್ದಾರೆ.

ಏನೇನಿರಲಿದೆ?: ಓಟ್ಸ್‌ ಹಾಲು ಅಥವಾ ಸೋಯಾ ಹಾಲು, ಸಜ್ಜೆ ಸೂಪು, ರಾಗಿ, ಬಟಾಣಿಯ ಸೂಪು, ಸಜ್ಜೆ ಈರುಳ್ಳಿ ಕಟ್‌ಲೆಟ್‌, ರಾಗಿ ಮತ್ತು ರವಾ ಇಡ್ಲಿ, ಸಾಂಬಾರು ಇರಲಿವೆ. ಇದರೊಂದಿಗೆ ರಾಗಿ ದೋಸೆ, ಶೇಂಗಾ ಚಟ್ನಿ, ರಾಜಗಿರಿ ಪೂರಿ ಜೊತೆಗೆ ಆಲೂಗಡ್ಡೆ ಪಲ್ಯ, ಸಜ್ಜೆ ಅಥವಾ ರಾಗಿ ರೊಟ್ಟಿ, ಸಜ್ಜೆಯ ಕಿಚಡಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT