ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲ್ಲಲು ಮೋದಿ ವರ್ಚಸ್ಸಷ್ಟೇ ಸಾಲದು: ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್‌ ಅಭಿಮತ

ಕರ್ನಾಟಕದ ಫಲಿತಾಂಶದ ವಿಶ್ಲೇಷಣೆ
Published 5 ಜೂನ್ 2023, 19:37 IST
Last Updated 5 ಜೂನ್ 2023, 19:37 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹಾಗೂ ಹಿಂದುತ್ವ ಸಿದ್ಧಾಂತವನ್ನು ಮುನ್ನೆಲೆಗೆ ತರುವುದರಿಂದಷ್ಟೇ ಭವಿಷ್ಯದಲ್ಲಿ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ’ 

–ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖವಾಣಿ ‘ದಿ ಆರ್ಗನೈಸರ್’,  ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲನ್ನು ವಿಶ್ಲೇಷಿಸಿ ಬರೆದಿರುವ ಲೇಖನದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

‘ಸ್ಥಳೀಯವಾಗಿ ಬಲವಾದ ನಾಯಕತ್ವ ಹಾಗೂ ಯೋಜನೆಗಳ ಪರಿಣಾಮಕಾರಿ ಜಾರಿ ಇಲ್ಲದೇ ಮೋದಿ ಅವರ ವರ್ಚಸ್ಸು, ಹಿಂದುತ್ವ ಸಿದ್ಧಾಂತದಿಂದಲೇ ಚುನಾವಣೆಗಳನ್ನು ಗೆಲ್ಲಲಾಗದು. ರಾಜ್ಯದಲ್ಲಿ ಆಡಳಿತ ಉತ್ತಮವಿದ್ದಾಗ ಮಾತ್ರ ಸಿದ್ಧಾಂತ ಮತ್ತು ನಾಯಕತ್ವವು ಪಕ್ಷಕ್ಕೆ ನಿಜಕ್ಕೂ ಆಸ್ತಿಯಾಗುತ್ತದೆ:’ ಎಂದು ವಿಶ್ಲೇಷಿಸಿದೆ.

ಮೇ 23ರ ಸಂಚಿಕೆಯಲ್ಲಿ ಈ ಕುರಿತು ಸಂಪಾದಕೀಯ ಬರೆದಿರುವ ಆರ್‌ಎಸ್‌ಎಸ್‌ ಮುಖವಾಣಿ ಪತ್ರಿಕೆಯು ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಅಂಕಿ ಅಂಶಗಳನ್ನೇ 2024ರ ಸಾರ್ವತ್ರಿಕ ಚುನಾವಣೆಗೆ ಹೊಂದಿಸಿ ನೋಡಿದರೆ ಭೀತಿ ಮೂಡುತ್ತದೆ. ಕರ್ನಾಟಕದ ಫಲಿತಾಂಶವು ವಿರೋಧ ಪಕ್ಷಗಳ ನೈತಿಕಸ್ಥೈರ್ಯವನ್ನು ವೃದ್ಧಿಸಿದೆ ಎಂದು ಹೇಳಿದೆ.

ಭ್ರಷ್ಟಾಚಾರ ಆರೋಪ ಕರ್ನಾಟಕ ಚುನಾವಣೆಯಲ್ಲಿ ಮುಖ್ಯಪಾತ್ರ ವಹಿಸಿತು. ಆಡಳಿತ ವಿರೋಧಿ ಅಲೆ ಎದುರು ಮೋದಿ ಜನಪ್ರಿಯತೆ ನಿಲ್ಲಲಿಲ್ಲ. ಮೋದಿ ಅವರು ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲಿಗೆ ಬಿಜೆಪಿ ಚುನಾವಣೆಯಲ್ಲಿ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳಬೇಕಾಯಿತು. ಸಚಿವರ ವಿರುದ್ಧದ ಆಡಳಿತವಿರೋಧಿ ಅಲೆಯನ್ನೂ ಪ್ರಮುಖವಾಗಿ ಗಮನಿಸಬೇಕು ಎಂದು ಹೇಳಿದೆ.

ಕರ್ನಾಟಕ ವಿಧಾನಸಭೆಗೆ ಈಚೆಗೆ ನಡೆದಿದ್ದ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದ ವಿ.ಸೋಮಣ್ಣ, ಡಾ.ಕೆ.ಸುಧಾಕರ್, ಬಿ.ಶ್ರೀರಾಮುಲು, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ಪಾಟೀಲ, ಎಂ.ಟಿ.ಬಿ ನಾಗರಾಜ್, ಕೆ.ಸಿ.ನಾರಾಯಣಗೌಡ, ಬಿ.ಸಿ.ನಾಗೇಶ್‌ ಸೇರಿದಂತೆ ಹಲವು ಪ್ರಮುಖರು ಪರಾಭವಗೊಂಡಿದ್ದರು.

‘ಸ್ಥಳೀಯ ಮಟ್ಟದಲ್ಲಿ ನಡೆಸಿದ ಪ್ರಚಾರಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ಅನುಕೂಲವಾಯಿತು. ಚುನಾವಣೆಯಲ್ಲಿ ರಾಷ್ಟ್ರಮಟ್ಟದ ನಾಯಕರ ಪಾತ್ರವನ್ನು ಮಿತಗೊಳಿಸಿ, ಸ್ಥಳೀಯ ಮಟ್ಟದಲ್ಲಿಯೇ ಪ್ರಚಾರವನ್ನು ನಡೆಸಿದ್ದು ಕಾಂಗ್ರೆಸ್‌ಗೆ ಲಾಭವಾಗಿದೆ. ‘ಕುಟುಂಬ ನೇತೃತ್ವದ’ ಪಕ್ಷವು ಈ ಚುನಾವಣೆಯಲ್ಲಿ ರಾಜ್ಯಮಟ್ಟದಲ್ಲಿ ಸರ್ವಾನುಮತದ ನಾಯಕರನ್ನು ಮುನ್ನೆಲೆಯಲ್ಲಿ ಬಿಂಬಿಸಿದ್ದರಿಂದ 2018ರ ಚುನಾವಣೆಗೆ ಹೋಲಿಸಿದರೆ ಶೇ 5ರಷ್ಟು ಅಧಿಕ ಮತಗಳಿಸಿತು’ ಎಂದು ಆರ್ಗನೈಸರ್‌ ಫಲಿತಾಂಶವನ್ನು ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT