ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

TN ಲೋಕಸೇವಾ ಆಯೋಗದ ಅಧ್ಯಕ್ಷರ ನೇಮಕ; ಸರ್ಕಾರದ ಶಿಫಾರಸು ತಿರಸ್ಕರಿಸಿದ ರಾಜ್ಯಪಾಲ

Published 22 ಆಗಸ್ಟ್ 2023, 10:02 IST
Last Updated 22 ಆಗಸ್ಟ್ 2023, 10:02 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಹೆಸರನ್ನು ರಾಜ್ಯಪಾಲ ಆರ್.ಎನ್.ರವಿ ತಿರಸ್ಕರಿಸಿದ್ದಾರೆ. ಆ ಮೂಲಕ ರಾಜ್ಯಪಾಲ ಮತ್ತು ಆಡಳಿತಾರೂಢ ಡಿಎಂಕೆ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ.

ಕಳೆದ ಜೂನ್‌ನಲ್ಲಿ ರಾಜ್ಯ ಡಿಜಿಪಿ ಹುದ್ದೆಯಿಂದ ನಿವೃತ್ತಗೊಂಡ ಐಪಿಎಸ್ ಅಧಿಕಾರಿ ಸಿ. ಸೈಲೇಂದ್ರ ಬಾಬು ಅವರನ್ನು ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿ ರಾಜಭವನಕ್ಕೆ ಕಳುಹಿಸಿತ್ತು. ಆದರೆ ಕಡತವನ್ನು ರಾಜ್ಯಪಾಲರು ಮರಳಿಸಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ದೃಢಪಡಿಸಿದ್ದಾರೆ.

ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ 301 ಕಾರ್ಯಕ್ರಮಗಳ ಮಾದರಿ ಪಠ್ಯಕ್ರಮವನ್ನು ತಮಿಳುನಾಡು ಉನ್ನತ ಶಿಕ್ಷಣ ಸಮಿತಿಯು ಬಿಡುಗಡೆ ಮಾಡಿದೆ. ಶೇ 75ರಷ್ಟು ಸಾಮಾನ್ಯ ಸಿಲಬಸ್‌ ಅನ್ನು ಅನುಸರಿಸುವಂತೆ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ. ಉಳಿದ ಶೇ 25ರಷ್ಟನ್ನು ಆಯಾ ಪ್ರಾದೇಶಿಕತೆಗೆ ತಕ್ಕಂತ ಬಳಸುವ ಅಧಿಕಾರವನ್ನು ನೀಡಿದೆ. ಆದರೆ ಇದಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಉನ್ನತ ಶಿಕ್ಷಣ ಅಕಾಡೆಮಿ ಶಿಫಾರಸು ಮಾಡಿದ ಪಠ್ಯಕ್ರಮವನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸಲು ನನ್ನದೇನೂ ತಕರಾರು ಇಲ್ಲ. ಆದರೆ ಯುಜಿಸಿ ನಿಯಮಾವಳಿಯಲ್ಲಿ ವಿಶ್ವವಿದ್ಯಾಲಯಗಳು ಹಾಗೂ ಸ್ವಾಯತ್ತ ಕಾಲೇಜುಗಳು  ಪಠ್ಯಕ್ರಮವನ್ನು ನಿರ್ದಿಷ್ಟ ಚೌಕಟ್ಟು ಹಾಗು ಮಾನದಂಡಗಳನ್ನು ಆಧರಿಸಿ ಸಿದ್ಧಪಡಿಸಲು ಹಾಗೂ ಬೋಧಿಸಲು ಸ್ವತಂತ್ರರು. ಆದರೆ ಅವುಗಳಲ್ಲಿ ಯುಜಿಸಿ ಕಾಲಕಾಲಕ್ಕೆ ಬಿಡುಗಡೆ ಮಾಡುವ ಮಾರ್ಗಸೂಚಿಯ ಪಾಲನೆ ಆಗಿರಬೇಕು’ ಎಂದಿದ್ದಾರೆ.

‘ಆದರೆ ರಾಜ್ಯ ಸರ್ಕಾರವು ಅಕಾಡೆಮಿ ಸಿದ್ಧಪಡಿಸಿದ ಪಠ್ಯವನ್ನು ಬಲವಂತವಾಗಿ ಹೇರುತ್ತಿದೆ ಎಂದು ಕುಲಪತಿಗಳು, ಕಾಲೇಜುಗಳ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿಗಳು ಯುಜಿಸಿಗೆ ದೂರು ಸಲ್ಲಿಸಿವೆ. ರಾಜ್ಯ ಸರ್ಕಾರದ ಕ್ರಮದಿಂದ ಶೈಕ್ಷಣಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗಲಿದೆ. ಜತೆಗೆ ಶಿಫಾರಸು ಮಾಡಿರುವ ಏಕರೂಪ ಪಠ್ಯಕ್ರಮವು ಸಂಸ್ಥೆಗಳು ಸಿದ್ಧಪಡಿಸಿಕೊಂಡಿರುವ ಪಠ್ಯಕ್ರಮಕ್ಕಿಂತ ಹಿಂದಿನದಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಳತನ್ನು ಕಲಿಸಿದಂತಾಗಲಿದೆ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ’ ಎಂದು ರಾಜ್ಯಪಾಲ ರವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT