ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಆರೋಪಿ ಪತ್ತೆಗೆ 3 ದಿನ ನಿದ್ರಿಸದೆ 700 ಸಿಸಿಟಿವಿ ವೀಕ್ಷಿಸಿದ ಪೊಲೀಸರು!

Published 30 ಸೆಪ್ಟೆಂಬರ್ 2023, 6:54 IST
Last Updated 30 ಸೆಪ್ಟೆಂಬರ್ 2023, 6:54 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿ ಅತ್ಯಾಚಾರಕ್ಕೆ ಗುರಿಯಾಗಿ ಅರೆ ಬೆತ್ತಲಿನ ಸ್ಥಿತಿಯಲ್ಲಿ ರಸ್ತೆಗಳಲ್ಲಿ ರಕ್ಷಣೆಗಾಗಿ ಓಡಾಡಿದ್ದ ಅಮಾನವೀಯ ಕೃತ್ಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸಿವೆ.

ಈ ಬೆಳವಣಿಗೆಗಳ ನಡುವೆ ಕೃತ್ಯ ಎಸಗಿದ್ದ ಪ್ರಮುಖ ಆರೋಪಿ ಭರತ್ ಸೋನಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣ ಸಂಬಂಧ ನೂರಾರು ಜನರನ್ನು ವಿಚಾರಣೆಗೆ ಒಳಪಡಿಸಲಾಯಿತು. 700ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುವ ಮೂಲಕ ಈ ಪ್ರಕರಣವನ್ನು ಭೇದಿಸಲು ಅಸಾಮಾನ್ಯ ಪ್ರಯತ್ನ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

30ರಿಂದ 35 ಪೊಲೀಸರ ತಂಡ ತನಿಖೆಯಲ್ಲಿ ನಿರತವಾಗಿತ್ತು. ಮೂರ್ನಾಲ್ಕು ದಿನ ಯಾರೂ ನಿದ್ದೆ ಮಾಡಲಿಲ್ಲ. ಸ್ಥಳ ಪರಿಶೀಲನೆಗೆ ಕರೆದೊಯ್ದಿದ್ದಾಗ, ಆತ (ಆರೋಪಿ) ತಪ್ಪಿಸಿಕೊಳ್ಳಲು ಯತ್ನಿಸಿದ. ಆದರೆ, ಸಿಬ್ಬಂದಿ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ತೀವ್ರ ರಕ್ತಸ್ರಾವವಿದ್ದ ಬಾಲಕಿಯೊಬ್ಬಳು ನಿಶ್ಯಕ್ತ ಸ್ಥಿತಿಯಲ್ಲಿ ರಕ್ಷಣೆಗಾಗಿ ಉಜ್ಜಯಿನಿಯ ರಸ್ತೆಗಳಲ್ಲಿ ಅಲೆದಾಡುತ್ತಿದ್ದ ದೃಶ್ಯಗಳಿದ್ದ ವಿಡಿಯೊವೊಂದು ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಬಳಿಕ ಈ ಅಮಾನವೀಯ ಕೃತ್ಯ ಬಯಲಾಗಿತ್ತು.

ಅತ್ಯಾಚಾರ ಪ್ರಕರಣದ ಸಂಬಂಧ ಮತ್ತೊಬ್ಬ ಆಟೊ ಚಾಲಕ ರಾಕೇಶ್ ಮಾಳವಿಯಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೃತ್ಯ ವೆಸಗಿದ ಬಳಿಕ ಆರೋಪಿಗಳು ಆಟೊದಲ್ಲಿ ಪ್ರಯಾಣಿಸಿದ್ದರು. ಈ ಕುರಿತು ರಾಕೇಶ್, ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.

ಆಟೊ ಚಾಲಕನಿಗೆ ಗೊತ್ತಿದ್ದೂ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಹಾಗಾಗಿ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುವುದು. ಪೊಲೀಸರಿಗೆ ಮಾಹಿತಿ ನೀಡದ ವ್ಯಕ್ತಿಗಳು ಕಂಡುಬಂದಲ್ಲಿ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಜ್ಜಯಿನಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಂತ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

ಆರೋಪಿ ತಂದೆ ಹೇಳಿದ್ದೇನು?

ಅತ್ಯಾಚಾರ ಆರೋಪಿಯ ಭರತ್ ಸೋನಿಯ ತಂದೆ ರಾಜು ಸೋನಿ ಮಾತನಾಡಿ, ತಪ್ಪಿತಸ್ಥನಾಗಿದ್ದರೆ ತನ್ನ ಮಗನಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ಇದು ಹೇಯ ಕೃತ್ಯವಾಗಿದ್ದು, ಆರೋಪಿಗೆ ಶಿಕ್ಷೆಯಾಗಬೇಕಿದೆ. ಮರಣದಂಡನೆ ಶಿಕ್ಷೆ ಹೊರತಾಗಿ ಬೇರೆ ಶಿಕ್ಷೆ ನೀಡುವುದಾದರೇ ನಾನೇ ಆತನನ್ನು ಹತ್ಯೆ ಮಾಡುತ್ತೇನೆ ಎಂದು ಬೇಸರ ಹೊರ ಹಾಕಿದ್ದಾರೆ.

ರಕ್ತದಾನ ಮಾಡಿದ ಪೊಲೀಸರು

ಇಬ್ಬರು ಪೊಲೀಸರು ಬಾಲಕಿಗೆ ರಕ್ತದಾನ ಮಾಡುವ ಮೂಲಕ ನೆರವಾಗಿದ್ದಾರೆ. ಮತ್ತು ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಬಾಲಕಿಯನ್ನು ದತ್ತು ಪಡೆಯಲು ಬಯಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT