ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ ಬೆಟ್ಟದಲ್ಲಿ ಚಿರತೆ ದಾಳಿ; ಮಕ್ಕಳನ್ನು ಕರೆದುಕೊಂಡು ಹೋಗುವ ಸಮಯ ಬದಲು

Published 14 ಆಗಸ್ಟ್ 2023, 6:12 IST
Last Updated 14 ಆಗಸ್ಟ್ 2023, 6:12 IST
ಅಕ್ಷರ ಗಾತ್ರ

ತಿರುಪತಿ: ತಿರುಮಲ ವೆಂಕಟೇಶ್ವರ ದರ್ಶನಕ್ಕೆ ಮಕ್ಕಳೊಂದಿಗೆ ಬೆಟ್ಟ ಹತ್ತುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಹೊಸ ನಿಯಮವನ್ನು ಪ್ರಕಟಿಸಿದೆ. 

ಚಿರತೆ ದಾಳಿಗೆ ಆರು ವರ್ಷದ ಮಗು ಬಲಿಯಾದ ಪ್ರಕರಣದ ನಂತರ ಪೊಲೀಸರು ಬೆಟ್ಟ ಹತ್ತಲು ಮಕ್ಕಳನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಒಂದಷ್ಟು ಬದಲಾವಣೆ ಮಾಡಿದ್ದಾರೆ. ಇದಕ್ಕಾಗಿ ಅಲಿಪಿರಿ ಹಾಗೂ ತಿರುಮಲ ನಡುವಿನ 7ನೇ ಮೈಲಿಯಲ್ಲಿ ಪೊಲೀಸ್ ಚೌಕಿಗಳನ್ನು ತೆರೆಯಲಾಗಿದೆ. ಇಲ್ಲಿ ಮಕ್ಕಳು ಹಾಗೂ ಶಿಶುಗಳ ಕೈಗೆ ಭದ್ರತಾ ಟ್ಯಾಗ್‌ ಅನ್ನು ಕಟ್ಟಿ ಕಳುಹಿಸಲಾಗುತ್ತಿದೆ.

ಜತೆಗೆ 15 ವರ್ಷದೊಳಗಿನ ಮಕ್ಕಳನ್ನು ಬೆಟ್ಟ ಹತ್ತಲು ಕರೆದುಕೊಂಡು ಹೋಗುವವರಿಗೆ ಬೆಳಿಗ್ಗೆ 5ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ಸಮಯ ನಿಗದಿ ಮಾಡಿದೆ. ಜತೆಗೆ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ದ್ವಿಚಕ್ರ ವಾಹನಗಳಿಗೆ ಘಾಟಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

‘ತಿರುಮಲ ಬೆಟ್ಟದ ಐದು ಕಡೆ ಚಿರತೆಗಳ ಚಲನವಲನ ಕಂಡುಬಂದಿದೆ. ಇವುಗಳಲ್ಲಿ ಮೂರು ಚಿರತೆಗಳು ಅಲಿಪಿರಿ ಹಾಗೂ ಘಾಟಿಯ 38ನೇ ತಿರುವಿನಲ್ಲಿರುವ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಇರುವ ಗಾಳಿಗೋಪುರಂ ಬಳಿ ಕಾಣಿಸಿಕೊಂಡಿವೆ’ ಎಂದು ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ.

‘ಘಾಟಿಯ ಕೆಳ ಭಾಗದಲ್ಲೂ ಭಾನುವಾರ ಬೆಳಿಗ್ಗೆ 6.30ರ ಸುಮಾರಿಗೆ ಚಿರತೆ ಕಂಡುಬಂದಿತ್ತು. ಚಿರತೆಯ ಚಲನವಲನ ಬೆಳಿಗ್ಗೆ 5ರಿಂದ 8 ಗಂಟೆಯವರೆಗೆ ಹೆಚ್ಚಾಗಿದೆ. ಎಚ್ಚರ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಟ್ಟ ಹತ್ತುವ ಮಾರ್ಗದ ಮೆಟ್ಟಿಲುಗಳ ಮೇಲೂ ಚಿರತೆ ಓಡಾಡಿದ್ದನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುತಿಸಿದ್ದಾರೆ. ಇವುಗಳನ್ನು ಓಡಿಸಲು ಪಟಾಕಿಗಳನ್ನು ಅಲ್ಲಲ್ಲಿ ಸಿಡಿಸಲಾಗಿದೆ’ ಎಂದು ಟಿಟಿಡಿ ವಿಚಕ್ಷಣದಳ ಸಿಬ್ಬಂದಿ ತಿಳಿಸಿದ್ದಾರೆ. 

‘ಘಾಟಿಯಲ್ಲಿ ಪ್ರಾರಂಭಿಸಲಾಗಿರುವ ಪೊಲೀಸ್ ಚೌಕಿಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವ ಪಾಲಕರ ವಿವರಗಳನ್ನು ದಾಖಲಿಸಲಾಗುತ್ತಿದೆ. ಮಕ್ಕಳ ಕೈಗೆ ಟ್ಯಾಗ್ ಕಟ್ಟಲಾಗುತ್ತಿದೆ. ಪಾಲಕರು ಮಕ್ಕಳನ್ನು ಕೈಬಿಡದಂತೆ ಹಾಗೂ ಮಕ್ಕಳು ಪಾಲಕರನ್ನು ಬಿಟ್ಟಿರದಂತೆ ಸೂಚನೆ ನೀಡಲಾಗುತ್ತಿದೆ. ಒಂದೊಮ್ಮೆ ಪಾಲಕರಿಂದ ಮಕ್ಕಳು ಪ್ರತ್ಯೇಕಗೊಂಡರೆ ಕೈಗೆ ಕಟ್ಟಿರುವ ಟ್ಯಾಗ್‌ ಮೂಲಕ ಪಾಲಕರ ಪತ್ತೆ ಕಾರ್ಯ ನಡೆಸಲಾಗುವುದು. ಈ ಪದ್ಧತಿಯನ್ನು ಬ್ರಹ್ಮೋತ್ಸವ ಸಂದರ್ಭದಲ್ಲಿ ಪಾಲಿಸಲಾಗುತ್ತಿತ್ತು. ಆದರೆ ಇವು ಡಿಜಿಟಲ್ ಅಥವಾ ಆರ್‌ಎಫ್‌ಐಡಿ ಟ್ಯಾಗ್ ಅಲ್ಲ’ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ ರೆಡ್ಡಿ ತಿಳಿಸಿದ್ದಾರೆ. 

ವನ್ಯ ಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಭಕ್ತರನ್ನು ಕೋರಿದೆ. ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು ಉನ್ನತಮಟ್ಟದ ಸಭೆಯನ್ನು ಸೋಮವಾರ ಸಂಜೆ ನಡೆಸಲಿದ್ದಾರೆ. ಇದರಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಪಾಲ್ಗೊಳ್ಳಲಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರ ಸುರಕ್ಷತೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ತಿರುಮಲ ಅರಣ್ಯ ಪ್ರದೇಶದಲ್ಲಿ ಮಗುವಿನ ಮೇಲಿನ ಚಿರತೆ ದಾಳಿ ಕುರಿತು ಆಂಧ್ರಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಟಿಟಿಡಿಯಿಂದ ವರದಿ ಕೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT