ಹೈದರಾಬಾದ್: ಕರ್ನಾಟಕದ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್‌ವೊಂದು ತುಂಡಾಗಿ ಭಾರಿ ಪ್ರಮಾಣದ ನೀರು ನದಿಗೆ ಹರಿಯುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳ ಸಭೆ ನಡೆಸಿ, ಪರಿಸ್ಥಿತಿ ಮೇಲೆ ನಿಗಾ ಇರಿಸುವಂತೆ ಭಾನುವಾರ ಸೂಚಿಸಿದ್ದಾರೆ.
ಗೇಟ್ ಅಳವಡಿಕೆ ಕಾರ್ಯದಲ್ಲಿ ತುಂಗಭದ್ರಾ ಅಣೆಕಟ್ಟೆ ಅಧಿಕಾರಿಗಳಿಗೆ ನೆರವಾಗಲು ಎಂಜಿನಿಯರುಗಳ ತಂಡವೊಂದನ್ನು ಅವಘಡ ಸಂಭವಿಸಿದ ಸ್ಥಳಕ್ಕೆ ಕಳುಹಿಸುವಂತೆ ರಾಜ್ಯದ ಜಲಸಂಪನ್ಮೂಲ ಇಲಾಖೆಗೆ ನಾಯ್ಡು ಸೂಚನೆ ನೀಡಿದ್ದಾರೆ.
‘ಸ್ಟಾಪ್‌ಲಾಕ್ ಗೇಟ್ ಬಳಸಿ, ತುಂಡಾಗಿರುವ ಗೇಟ್ ಅನ್ನು ತಾತ್ಕಾಲಿಕವಾಗಿ ಮರುಜೋಡಣೆ ಮಾಡಬಹುದು’ ಎಂದು ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಜಿ.ಸಾಯಿ ಪ್ರಸಾದ್ ಸಭೆಗೆ ಮಾಹಿತಿ ನೀಡಿದರು.
‘ಅಣೆಕಟ್ಟೆಯು ಹಳೆ ವಿನ್ಯಾಸದಿಂದ ಕೂಡಿರುವ ಕಾರಣ ಸ್ಟಾಪ್‌ಲಾಕ್ ಗೇಟ್ ಅಳವಡಿಕೆ ಕಷ್ಟ’ ಎಂದು ಜಲ ಸಂಪನ್ಮೂಲ ಸಚಿವ ನಿಮ್ಮಲ ರಾಮ ನಾಯ್ಡು ಅಭಿಪ್ರಾಯಪಟ್ಟರು.
ನದಿಗೆ ಹೆಚ್ಚುವರಿಯಾಗಿ ನೀರು ಹರಿಯುತ್ತಿರುವ ಕಾರಣ, ಸಂಭಾವ್ಯ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಶ್ರೀಶೈಲಂ, ನಾಗರಾರ್ಜುನ ಸಾಗರ ಹಾಗೂ ಪುಲಿಚಿಂತಲ ಯೋಜನೆಗಳ ಎಂಜಿನಿಯರ್‌ಗಳಿಗೆ ಸಚಿವ ನಿಮ್ಮಲ ರಾಮ ನಾಯ್ಡು ಸೂಚಿಸಿದ್ದಾರೆ.
ಎಚ್ಚರಿಕೆ: ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್‌ವೊಂದು ತುಂಡಾಗಿ, ಅಪಾರ ಪ್ರಮಾಣದ ನೀರು ನದಿಗೆ ಹರಿಯುತ್ತಿರುವುದರಿಂದ ಕರ್ನೂಲು ಜಿಲ್ಲೆಯಲ್ಲಿ ನದಿಪಾತ್ರದ ಜನರು ಜಾಗರೂಕರಾಗಿರುವಂತೆ ಆಂಧ್ರಪ್ರದೇಶ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.