ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ ಪಂಚಾಯ್ತಿ ಚುನಾವಣೆ ಹಿಂಸಾಚಾರದಲ್ಲಿ ಬಾಂಬ್ ಸ್ಫೋಟಕ್ಕೆ ಮಕ್ಕಳಿಗೆ ಗಾಯ

Published 8 ಜುಲೈ 2023, 11:16 IST
Last Updated 8 ಜುಲೈ 2023, 11:16 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಮೂರು ಸ್ಥರಗಳ ಪಂಚಾಯ್ತಿ ಚುನಾವಣೆಯಲ್ಲಿ ಹಿಂಸಾಚಾರ ಬುಗಿಲೆದ್ದಿದ್ದು, ಬಾಂಬ್‌ ಸ್ಪೋಟಕ್ಕೆ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡ ಮಕ್ಕಳನ್ನು ರಾಜ್ಯಪಾಲ ಡಾ. ಸಿ.ವಿ.ಆನಂದ ಬೋಸ್ ಅವರು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ರಾಜ್ಯದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಶನಿವಾರ ನಡೆದ ಮತದಾನ ಸಂದರ್ಭದಲ್ಲಿ ದುಷ್ಕರ್ಮಿಗಳು ಇಟ್ಟಿದ್ದ ಕಚ್ಚಾ ಬಾಂಬ್‌ ಸ್ಫೋಟಗೊಂಡು 8 ಹಾಗೂ 10 ವರ್ಷದ ಇಬ್ಬರು ಮಕ್ಕಳು ಸೇರಿ ಹಲವರು ಗಾಯಗೊಂಡಿದ್ದಾರೆ. ಚೆಂಡು ಎಂದುಕೊಂಡ ಮಕ್ಕಳು ಬಾಂಬ್ ಅನ್ನು ಮುಟ್ಟಿದಾಗ ಅದು ಸ್ಫೋಟಗೊಂಡಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಇನ್ನಷ್ಟು ಬಾಂಬುಗಳು ಇರುವ ಕುರಿತು ಪತ್ತೆಕಾರ್ಯ ಕೈಗೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಸ್ಥಳೀಯರು ಪ್ರತಿಭಟನೆ ನಡೆಸಿದರು.

‘ಮತದಾರರನ್ನು ಬೆದರಿಸುವ ಸಲುವಾಗಿ ಶುಕ್ರವಾರ ರಾತ್ರಿಯೇ ಕಚ್ಬಾ ಬಾಂಬುಗಳನ್ನು ಇಡಲಾಗಿದೆ. ಸ್ಥಳದಲ್ಲಿ ಆಗ ಪೊಲೀಸರೇ ಇರಲಿಲ್ಲ. ಇದ್ದಿದ್ದರೆ ಇಂಥ ಅನಾಹುತ ತಪ್ಪಿಸಬಹುದಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಮಾಹಿತಿ ಪಡೆದ ರಾಜ್ಯಪಾಲ ಡಾ. ಸಿ.ವಿ.ಆನಂದ ಬೋಸ್, ಮಕ್ಕಳ ಮನೆಗೆ ಭೇಟಿ ನೀಡಿ ಪಾಲಕರೊಂದಿಗೆ ಚರ್ಚಿಸಿದರು. ನಂತರ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಕೊಲ್ಕತ್ತದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಗಾಯಗೊಂಡ ಮಕ್ಕಳನ್ನು ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದರು. 

ಇದಕ್ಕೂ ಮೊದಲು ರಾಜ್ಯಪಾಲರು ನಾಡಿಯಾ ಜಿಲ್ಲೆಯತ್ತ ಪ್ರಯಾಣ ಬೆಳೆಸಿದ್ದರು. ಆದರೆ ಕಲ್ಯಾಣಿ ಎಕ್ಸ್‌ಪ್ರೆಸ್‌ವೇ ನಲ್ಲಿ ಬಸುದೇಬ್‌ಪುರ್‌ ಬಳಿ ಬಿಜೆಪಿ ಹಾಗೂ ಸಿಪಿಐ(ಎಂ) ಕಾರ್ಯಕರ್ತರು ಅವರನ್ನು ತಡೆದು ‘ಮತಗಳನ್ನು ಲೂಟಿ’ ಮಾಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು. ನಂತರ ರಾಜ್ಯಪಾಲ ಆನಂದ ಬೋಸ್ ಅವರು ತಮ್ಮ ಪ್ರಯಾಣವನ್ನು ಬದಲಿಸಿ ಗಾಯಾಳುಗಳನ್ನು ಭೇಟಿ ಮಾಡಿದರು.

ರಾಜ್ಯ ಚುನಾವಣಾ ಆಯೋಗ ಹಾಗೂ ಪೊಲೀಸರಿಗೆ ಸ್ಥಳದಲ್ಲೇ ಕರೆ ಮಾಡಿದರಾದರೂ, ಮೊಬೈಲ್ ಸಂಪರ್ಕ ಸಮಸ್ಯೆಯಿಂದ ಅದು ಸಾಧ್ಯವಾಗಲಿಲ್ಲ. ನಂತರ ಸಮೀಪದಲ್ಲಿದ್ದ ನಿರೀಕ್ಷಣಾ ಮಂದಿರದಲ್ಲಿ ಅಧಿಕಾರಿಗಳಿಗೆ ಕರೆ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದರು.

ಕೊಲ್ಕತ್ತಕ್ಕೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಚುನಾವಣೆ ಸಂದರ್ಭದಲ್ಲಿ ಹಲವು ಅಹಿತಕರ ಘಟನೆಗಳು ನಡೆದಿವೆ. ಈ ಕುರಿತು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ನೀಲಾಂಜನ್ ಶಾಂಡೀಲ್ಯ ಅವರು ವರದಿ ಕೇಳಿದ್ದಾರೆ. 

ಇದನ್ನೂ ಓದಿ: ಮತದಾನದ ದಿನವೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: ಹಲವು ಮಂದಿಯ ಕೊಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT