ನವದೆಹಲಿ: ‘ದ್ವಿಚಕ್ರ ವಾಹನ ತಯಾರಕರು ತಮ್ಮ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ನೀಡುವ ಮೂಲಕ ರಸ್ತೆ ಅಪಘಾತದಲ್ಲಿ ಸಂಭವಿಸಬಹುದಾದ ಸಾವಿನ ಸಂಖ್ಯೆ ಇಳಿಸಲು ಕೈಜೋಡಿಸಬೇಕು’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರ್ ಬುಧವಾರ ಹೇಳಿದ್ದಾರೆ.
‘ಹೆಲ್ಮೆಟ್ ಧರಿಸದ ಕಾರಣ 2022ರಲ್ಲಿ 50,029 ಜನ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರಿಯಾಯಿತಿ ದರದಲ್ಲಿ ಅಥವಾ ಕಡಿಮೆ ಬೆಲೆಗೆ ಹೆಲ್ಮೆಟ್ ನೀಡುವಂತಾದಲ್ಲಿ, ಬಹಳಷ್ಟು ಪ್ರಾಣಗಳನ್ನು ಉಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಾಹನ ತಯಾರಕರು ಯೋಚಿಸಬೇಕು’ ಎಂದಿದ್ದಾರೆ.
‘ಭಾರಿ ದಂಡದೊಂದಿಗೆ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಜಾರಿಗೆ ಬಂದಿದೆ. ಆದರೆ ಇಂಥ ಕಾನೂನುಗಳ ಪರಿಣಾಮಕಾರಿ ಜಾರಿಯೂ ದೊಡ್ಡ ಸವಾಲಾಗಿದೆ. ದೇಶದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಚಾಲನಾ ಕಲಿಕಾ ಕೇಂದ್ರಗಳನ್ನು ತೆರೆಯುವ ಯೋಜನೆ ಇದೆ. ಜತೆಗೆ ಶಾಲಾ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ’ ಎಂದು ಹೇಳಿದ್ದಾರೆ.
ಆರೋಗ್ಯ ಇಲಾಖೆಯನ್ನು ಒಳಗೊಂಡು ರಚಿಸಲಾದ ‘ಉದ್ದೇಶವಲ್ಲದ ಹಾನಿಯನ್ನು ನಿಯಂತ್ರಿಸುವ ರಾಷ್ಟ್ರೀಯ ತಂತ್ರ’ ಎಂಬ ಶೀರ್ಷಿಕೆಯ ನೂತನ ವರದಿಯಲ್ಲಿ, ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತದಲ್ಲಿನ ಬಹಳಷ್ಟು ಸಾವುಗಳು, ತಮ್ಮದಲ್ಲದ, ಉದ್ದೇಶವಲ್ಲದ ಘಾಸಿಗಳೇ ಆಗಿವೆ. ಅತಿ ವೇಗದ ವಾಹನ ಚಾಲನೆಯಿಂದ ಶೇ 43ರಷ್ಟು ಸಾವುಗಳು ಸಂಭವಿಸಿವೆ’ ಎಂದು ಗಡ್ಕರಿ ವಿವರಿಸಿದರು.
‘2022ರಲ್ಲಿ 4.30 ಲಕ್ಷ ಸಾವುಗಳು ಉದ್ದೇಶವಲ್ಲದ ಹಾಗೂ 1.70 ಲಕ್ಷ ಸಾವುಗಳು ಉದ್ದೇಶಪೂರ್ವಕವಾಗಿ ಸಂಭವಿಸಿವೆ. ಈಗ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ’ ಎಂದು ಹೇಳಿದ್ದಾರೆ.