ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಳಿಸಲು ಅಧಿಕಾರ ಕೊಟ್ಟವರು ಯಾರು: ಗುಜರಾತ್‌ ಪೊಲೀಸರಿಗೆ ಸುಪ್ರೀಂ ಕೋರ್ಟ್‌ ಛೀಮಾರಿ

Published 23 ಜನವರಿ 2024, 15:41 IST
Last Updated 23 ಜನವರಿ 2024, 15:41 IST
ಅಕ್ಷರ ಗಾತ್ರ

ನವದೆಹಲಿ: ಮುಸ್ಲಿಂ ಸಮುದಾಯಕ್ಕೆ ಸೇರಿದ ಐವರನ್ನು ಸಾರ್ವಜನಿಕವಾಗಿ ಥಳಿಸಿದ್ದ ಕೃತ್ಯದಲ್ಲಿ ಭಾಗಿಯಾಗಿದ್ದ ಗುಜರಾತ್‌ ಪೊಲೀಸರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಛೀಮಾರಿ ಹಾಕಿದೆ. ‘ಜನರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು’ ಎಂದು ಖಾರವಾಗಿ ಪ್ರಶ್ನಿಸಿದೆ.

ಇನ್‌ಸ್ಪೆಕ್ಟರ್‌ ಎ.ವಿ. ಪರ್ಮಾರ್‌, ಸಬ್‌ಇನ್‌ಸ್ಪೆಕ್ಟರ್‌ ಡಿ.ಬಿ.ಕುಮಾವತ್‌ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಸಂದೀಪ್‌ ಮೆಹ್ತಾ ಅವರಿದ್ದ ಪೀಠ ನಡೆಸಿತು. 

ಆರೋಪಿಗಳನ್ನು ಬಂಧಿಸುವ ಮತ್ತು ವಿಚಾರಣೆಗೆ ಒಳಪಡಿಸುವ ಕುರಿತ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗುಜರಾತ್‌ ಹೈಕೋರ್ಟ್‌, 2023ರ ಅಕ್ಟೋಬರ್‌ 19ರಂದು ಈ ನಾಲ್ವರಿಗೆ 14 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು. ಆದೇಶವನ್ನು ಪ್ರಶ್ನಿಸಲು ಪೊಲೀಸರಿಗೆ ಅವಕಾಶ ನೀಡುವ ಉದ್ದೇಶದಿಂದ ಹೈಕೋರ್ಟ್‌, ತನ್ನ ಆದೇಶದ ಅನುಷ್ಠಾನಕ್ಕೆ ಮೂರು ತಿಂಗಳ ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್‌ ಆದೇಶ ಪ‍್ರಶ್ನಿಸಿ ಪೊಲೀಸರು ಸುಪ್ರಿಂ ಕೋರ್ಟ್‌ ಮೊರೆ ಹೋಗಿದ್ದರು. 

‘ಜನರನ್ನು ಕಂಬಕ್ಕೆ ಕಟ್ಟಿ ಅವರಿಗೆ ಥಳಿಸಲು ಕಾನೂನಿನಲ್ಲಿ ನಿಮಗೆ ಅಧಿಕಾರವಿದೆಯೇ? ಹೋಗಿ ಜೈಲು ಶಿಕ್ಷೆ ಅನುಭವಿಸಿ’ ಎಂದು ನ್ಯಾಯಮೂರ್ತಿ ಗವಾಯಿ ಅವರು ಕೋಪದಿಂದ ಹೇಳಿದರು.

ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಮೆಹ್ತಾ, ‘ಜನರನ್ನು ಕಂಬಕ್ಕೆ ಕಟ್ಟಿ, ಸಾರ್ವಜನಿಕವಾಗಿ ಥಳಿಸಿದ್ದು ಅಲ್ಲದೆ ಅದರ ವಿಡಿಯೊ ಮಾಡಿದ್ದೀರಿ. ಈ ರೀತಿಯ ದೌರ್ಜನ್ಯ ನಡೆಸಿ ಇದೀಗ ನೀವು ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಬಯಸುತ್ತೀರಿ’ ಎಂದು ಕೇಳಿದರು. 

ಪೊಲೀಸರ ಪರ ವಕೀಲ ಸಿದ್ಧಾರ್ಥ್‌ ದವೆ ಅವರ ಮನವಿ ಆಲಿಸಿದ ಪೀಠ, ಮೇಲ್ಮನವಿಯ ವಿಚಾರಣೆಗೆ ಒಪ್ಪಿಕೊಂಡಿತು. 

ಏನಿದು ಪ್ರಕರಣ?: 2022ರ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗುಜರಾತ್‌ನ ಖೆಡಾ ಜಿಲ್ಲೆಯ ಉಂಡೇಲಾ ಗ್ರಾಮದಲ್ಲಿ ನೃತ್ಯ ಪ್ರದರ್ಶನ ನಡೆಯುತ್ತಿದ್ದ ವೇಳೆ ಗುಂಪೊಂದು ಕಲ್ಲು ತೂರಾಟ ನಡೆಸಿತ್ತು. ಕೆಲವು ಪೊಲೀಸರು ಮತ್ತು ಗ್ರಾಮಸ್ಥರು ಗಾಯಗೊಂಡಿದ್ದರು. ಕಲ್ಲು ತೂರಾಟ ನಡೆಸಿದ್ದ 13 ಮಂದಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಅದರಲ್ಲಿ ಐವರನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದರು. ಥಳಿತಕ್ಕೊಳಗಾದವರು ಪೊಲೀಸರ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT