ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನ್‌ಲೈನ್‌ ಹಣ ಪಾವತಿ ವಿಳಂಬ: ಗಂಗೆಯಲ್ಲಿ ಮುಳುಗಿ ಅಧಿಕಾರಿ ಸಾವು

Published 1 ಸೆಪ್ಟೆಂಬರ್ 2024, 15:11 IST
Last Updated 2 ಸೆಪ್ಟೆಂಬರ್ 2024, 3:09 IST
ಅಕ್ಷರ ಗಾತ್ರ

ಲಖನೌ: ನೀರಿನಲ್ಲಿ ಮುಳುಗುತ್ತಿದ್ದ ಅಧಿಕಾರಿಯೊಬ್ಬರನ್ನು ರಕ್ಷಿಸಲು ಮುಳುಗುತಜ್ಞರೊಬ್ಬರಿಗೆ ಆನ್‌ಲೈನ್‌ ಮೂಲಕ  ಹಣ ಪಾವತಿಸಲು ವಿಳಂಬವಾಗಿದ್ದರಿಂದ ಗಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಉತ್ತರಪ್ರದೇಶ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಆದಿತ್ಯವರ್ಧನ್‌ ಸಿಂಗ್‌ ಅವರು ಶನಿವಾರ ಕಾನ್ಪುರದಲ್ಲಿ ಗಂಗಾ ನದಿಗೆ ಬಿದ್ದು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಕೊನೆಯುಸಿರೆಳೆದಿದ್ದಾರೆ.

ಆಗಿದ್ದೇನು?: ಸಿಂಗ್‌ ಹಾಗೂ ಸ್ನೇಹಿತರು ಗಂಗಾ ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದಾರೆ. ಈ ವೇಳೆ ಅಧಿಕಾರಿಯು ಆಯತಪ್ಪಿ ನೀರಿಗೆ ಬಿದ್ದಿದ್ದಾರೆ.  ಸ್ಥಳದಲ್ಲಿದ್ದ ಮುಳುಗುತಜ್ಞ ಶೈಲೇಶ್‌ ಕಶ್ಯಪ್‌ ಅವರನ್ನು ಸ್ನೇಹಿತರು ನೆರವಿಗಾಗಿ ಕರೆದಿದ್ದಾರೆ. ₹10 ಸಾವಿರ ನೀಡಿದರೆ ಮಾತ್ರ ನೀರಿಗೆ ಧುಮುಕುವುದಾಗಿ ಕಶ್ಯಪ್‌ ಬೇಡಿಕೆ ಇಟ್ಟಿದ್ದಾರೆ.

ಸಿಂಗ್‌ ಸ್ನೇಹಿತರ ಬಳಿ ನಗದು ಇರಲಿಲ್ಲ. ತಕ್ಷಣವೇ, ಆನ್‌ಲೈನ್‌ ಮೂಲಕ ಹಣ ವರ್ಗಾವಣೆಗೆ ಮುಂದಾಗಿದ್ದಾರೆ. ಹಣ ಖಾತೆಗೆ ವರ್ಗಾವಣೆಯಾಗುವವರೆಗೆ ಮುಳುಗುತಜ್ಞ ದಡದ ಮೇಲೆ ಕಾದುಕೂತಿದ್ದರು. ಅಷ್ಟೊತ್ತಿಗಾಗಲೇ ಅಧಿಕಾರಿಯು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ.

‘ಹಣ ಬಂದಿರುವುದು ಖಚಿತವಾದ ಮೇಲೆ ನೀರಿಗೆ ಧುಮುಕಿದರೂ, ಅಧಿಕಾರಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಸಿಂಗ್‌ ಅವರು ನೀರಿಗೆ ಬಿದ್ದ ತಕ್ಷಣವೇ ನೀರಿಗೆ ಇಳಿದಿದ್ದರೆ ಅವರು ಬದುಕುತ್ತಿದ್ದರು’ ಎಂದು ಸ್ನೇಹಿತರು ದೂರಿದ್ದಾರೆ. 

‘ಆದಿತ್ಯವರ್ಧನ್‌ ಸಿಂಗ್‌ ಅವರನ್ನು ಕಾನ್ಪುರಕ್ಕೆ ನಿಯೋಜಿಸಲಾಗಿತ್ತು. ಇಲ್ಲಿನ ‘ನಾನಾಮಾವೂ’ ಘಾಟ್‌ಗೆ ಸ್ನೇಹಿತರ ಜತೆಗೆ  ಸ್ನಾನ ಮಾಡಲು ಬಂದಿದ್ದು, ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಕಾಲುಜಾರಿ ನದಿಗೆ ಬಿದ್ದಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಧಿಕಾರಿಯ ಪತ್ನಿ ಮಹಾರಾಷ್ಟ್ರದಲ್ಲಿ ನ್ಯಾಯಾಧೀಶೆಯಾಗಿದ್ದಾರೆ.

‘ದುರಂತದ ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮುಳುಗುತಜ್ಞರು, ದೋಣಿ ಮೂಲಕ ಹುಡುಕಾಟ ನಡೆಸಿದರು. ಆದರೂ ಮೃತದೇಹ ಪತ್ತೆಯಾಗಿಲ್ಲ, ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT