ನವದೆಹಲಿ: ಕೇರಳದ ಕೋಯಿಕ್ಕೋಡ್‌ನಲ್ಲಿ ವರದಿಯಾದ ಇಬ್ಬರ ಸಾವಿಗೆ ನಿಪಾ ವೈರಸ್ ಸೋಂಕು ಕಾರಣ ಎಂಬುದು ದೃಢವಾದ ಬಳಿಕ ಸೋಂಕು ತಡೆಗಟ್ಟುವ ಕ್ರಮವಾಗಿ ರಾಜ್ಯದ ಕೆಲ ಶಾಲೆ, ಕಚೇರಿಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಬುಧವಾರ ಬಂದ್ ಮಾಡಲಾಗಿತ್ತು.
‘ಕೇರಳದಲ್ಲಿ ಪತ್ತೆಯಾಗಿರುವುದು ನಿಪಾ ವೈರಸ್‌ನ ಬಾಂಗ್ಲಾದೇಶಿ ಉಪತಳಿ. ಇದು ಮಾನವರಿಂದ ಮಾನವರಿಗೆ ಹರಡುತ್ತದೆ. ಈ ಸೋಂಕಿಗೆ ಒಳಗಾದವರ ಸಾವಿನ ಪ್ರಮಾಣ ಹೆಚ್ಚೇ ಇರುತ್ತದೆ. ಆದರೆ ಇದರ ಸೋಂಕು ಪ್ರಸರಣ ದರ ಕಡಿಮೆ ಇರುತ್ತದೆ’ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಿ, ಸೋಂಕಿನ ಲಕ್ಷಣಗಳು ಕಂಡಬಂದವರನ್ನು ಪ್ರತ್ಯೇಕ ವಾಸದಲ್ಲಿ ಇರಿಸುವ ಕಡೆಗೆ ನಾವು ಈಗ ಗಮನಹರಿಸಿದ್ದೇವೆ. ವೈದ್ಯಕೀಯ ಬಿಕ್ಕಟ್ಟನ್ನು ತಡೆಯುವ ಸಲುವಾಗಿ ರಾಜ್ಯದ ಕೆಲ ಭಾಗಗಳಲ್ಲಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಕೋಯಿಕ್ಕೋಡ್ ಜಿಲ್ಲೆಯ ಸುಮಾರು ಏಳು ಗ್ರಾಮಗಳನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಕಠಿಣ ಪ್ರತ್ಯೇಕತಾವಾಸದಂಥ ಕ್ರಮ ಕೈಗೊಳ್ಳಲಾಗಿದೆ.
ಮೃತಪಟ್ಟವರಲ್ಲಿ ಒಬ್ಬರು ಕೃಷಿಕರು. ಅವರ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಸಂತ್ರಸ್ತರ ಮಗಳು ಮತ್ತು ಸೋದರ ಸಂಬಂಧಿಗೆ ಸೋಂಕು ದೃಢಪಟ್ಟಿದೆ. ಸದ್ಯ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಕುಟುಂಬದ ಇತರ ಸದಸ್ಯರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.
ಎರಡನೇ ಸಂತ್ರಸ್ತರು, ಆಸ್ಪತ್ರೆಯೊಂದರಲ್ಲಿ ಮೊದಲನೇ ಸಂತ್ರಸ್ತರ ಸಂಪರ್ಕಕ್ಕೆ ಬಂದ ಕಾರಣ ಸೋಂಕಿಗೆ ಒಳಗಾದವರು. ಆದರೆ ಇವರಿಬ್ಬರೂ ಸಂಬಂಧಿಗಳಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿಗೊಳಗಾಗಿರುವ ಒಂಬತ್ತು ವರ್ಷದ ಬಾಲಕ, ಮತ್ತೊಬ್ಬ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ 130 ಜನರನ್ನು ವೈರಸ್ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.