ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಹತ್ಯೆಗೆ ಸಂಚು: ಕವಿ ವರವರರಾವ್‌ ಬಂಧನ, ವ್ಯಾಪಕ ಟೀಕೆ

Last Updated 28 ಆಗಸ್ಟ್ 2018, 19:59 IST
ಅಕ್ಷರ ಗಾತ್ರ

ನವದೆಹಲಿ:ನಕ್ಸಲರಿಗೆ ನೆರವು ಮತ್ತು ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ಹೂಡಿರುವ ಆರೋಪದಲ್ಲಿ ತೆಲುಗು ಲೇಖಕ ವರವರ ರಾವ್‌ ಅವರನ್ನು ಬಂಧಿಸಿರುವುದಕ್ಕೆ ಸಾಹಿತಿಗಳು, ಲೇಖಕರು ಮತ್ತು ಹಲವು ಸಂಘಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬಂಧನವನ್ನು ಉಲ್ಲೇಖಿಸಿ ‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ’ ಎಂದು ಟೀಕಿಸಲಾಗಿದೆ.

ಕೋರೆಗಾಂವ್‌ ಗಲಭೆ ಮತ್ತು ನಕ್ಸಲರ ಜತೆ ಸಂಪರ್ಕ ಹೊಂದಿರುವ ಆರೋಪಕ್ಕೆ ಸಂಬಂಧಿಸಿ ಹೈದರಾಬಾದ್ ಸೇರಿದಂತೆ ದೇಶದ ಹಲವೆಡೆ ಪ್ರಸಿದ್ಧ ಹೋರಾಟಗಾರರ ಮನೆ ಮೇಲೆ ಮಂಗಳವಾರ ದಾಳಿ ನಡೆಸಿರುವ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ, ವರವರ ರಾವ್ ಹಾಗೂಸುಧಾಭಾರಾದ್ವಜ್‌ ಅವರನ್ನು ಬಂಧಿಸಲಾಗಿದೆ.

ರಾವ್‌ ಮಾತ್ರವಲ್ಲದೆಹೋರಾಟಗಾರರಾದ ವೆರ್ನಾನ್‌ ಗೊಂಜಾವಾಲ್‌, ಅರುಣ್‌ ಫೇರಾರಿಯಾ ಅವರ ಮನೆಗಳು (ಮುಂಬೈ), ವಕೀಲೆ ಸುಧಾ ಭಾರಾದ್ವಜ್‌ ಅವರ ನಿವಾಸ(ಛತ್ತೀಸ್‌ಗಢ, ಫರಿಯಾದಾಬಾದ್‌) ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಗೌತಮ್‌ ನವಲಖ ಅವರ ಮನೆ(ದೆಹಲಿ) ಮೇಲೂ ದಾಳಿ ನಡೆಸಲಾಗಿದೆ.‌

ಇದೊಂದು ಅಪಾಯಕಾರಿ ಬೆಳವಣಿಗೆ ಎಂದು ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕಿ ಅರುಂಧತಿ ರಾಯ್‌ ಬಣ್ಣಿಸಿದ್ದಾರೆ. ‘ಕಳೆದ ವರ್ಷ ಡಿಸೆಂಬರ್‌ 31ರಂದು ಮಹಾರಾಷ್ಟ್ರದಲ್ಲಿ ನಡೆದಭೀಮಾ ಕೋರೇಗಾಂವ್‌ಗಲಭೆ ಪ್ರಕರಣದ ತನಿಖೆಯ ಭಾಗವಾಗಿ ಹೈದರಾಬಾದ್‌ನಲ್ಲಿರುವ ರಾವ್‌ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ’ ಎಂದುಅರುಂಧತಿ ರಾಯ್‌ ಆರೋಪಿಸಿದ್ದಾರೆ.

‘ಸರ್ಕಾರವು ಪತನವಾಗುವ ಆತಂಕದಲ್ಲಿದೆ. ಗಲಭೆಕೋರರು, ಕೊಲೆಗಾರರೇ ಸ್ವತಂತ್ರವಾಗಿ ಓಡಾಡಿಕೊಂಡಿರುವಾಗ ವಕೀಲರು, ಲೇಖಕರು, ದಲಿತ ಹೋರಾಟಗಾರರನ್ನು ಬಂಧಿಸುತ್ತಿರುವುದು ನಗೆಪಾಟಲಿನ ಸಂಗತಿ. ಇದು ಸಂವಿಧಾನದ ಉಲ್ಲಂಘನೆ’ ಎಂದೂ ರಾಯ್ ದೂರಿದ್ದಾರೆ.

‘ಫ್ಯಾಸಿಸ್ಟ್ ಕೋರೆಹಲ್ಲುಗಳು ಈಗ ಹೊರಚಾಚಿಕೊಂಡಿವೆ’ ಎಂದು ಟ್ವೀಟ್‌ ಮಾಡಿರುವ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌,‘ಇದು ತುರ್ತು ಪರಿಸ್ಥಿತಿಯ ಸ್ಪಷ್ಟ ಘೋಷಣೆ. ಯಾರು ಸರ್ಕಾರವನ್ನು ಪ್ರಶ್ನಿಸುತ್ತಾರೋ ಅಂತಹವರ ಮೇಲೆ ದಾಳಿ ನಡೆಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತಿಹಾಸ ತಜ್ಞ ರಾಮಚಂದ್ರ ಗುಹಾ, ‘ಇದು ಖಂಡಿತ ಆಘಾತಕಾರಿ. ಸ್ವತಂತ್ರ ದನಿಗಳ ಮೇಲಾಗುತ್ತಿರುವ ಕಿರುಕುಳ, ದೌರ್ಜನ್ಯವನ್ನು ತಡೆಯಲು ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಗಲಭೆ ಮತ್ತು ಅಕ್ರಮಗಳ ವಿಚಾರದಲ್ಲಿ ಸುಧಾ ಭಾರಾಧ್ವಜ್‌ ಅವರು ಅಮಿತ್‌ ಶಾ ಅವರಿಗಿಂತ ದೂರದಲ್ಲಿದ್ದಾರೆ’ ಎಂದು ಗುಹಾ ಟ್ವೀಟ್‌ ಮಾಡಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕಿ ಶೆಹ್ಲಾ ರಶೀದ್‌, ‘ದಾಳಿಯು, ವ್ಯವಸ್ಥೆಯನ್ನು ಪ್ರಶ್ನಿಸುವವರಲ್ಲಿ ಭಯ ಮೂಡಿಸುವ ಒಂದು ಪ್ರಯತ್ನ ಅಷ್ಟೇ’ ಎಂದಿದ್ದಾರೆ.

‘ಇದು 2019ರ ಚುನಾವಣೆ ಹೊಸ್ತಿಲಲ್ಲಿ ವಿರೋಧಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ’ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಉಮರ್‌ ಖಲೀದ್‌ ದೂರಿದ್ದಾರೆ.

8 ತಾಸು ವಿಚಾರಣೆ:‘ಪುಣೆ ಪೊಲೀಸರು ಸೋಮವಾರ ರಾತ್ರಿಯೇ ಹೈದರಾಬಾದ್‌ಗೆ ಬಂದು ತಂಗಿದ್ದರು. ಮಂಗಳವಾರ ಬೆಳಿಗ್ಗೆಯೇ ವರವರ ರಾವ್ ಅವರ ಮನೆಗೆ ಬಂದು, ಶೋಧ ಕಾರ್ಯ ನಡೆಸಿದ್ದಾರೆ. ವರವರ ರಾವ್ ಅವರನ್ನು ಎಂಟು ತಾಸಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿ, ನಂತರ ಬಂಧಿಸಿದ್ದಾರೆ. ಬಂಧಿತರನ್ನು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ’ ಎಂದು ಮೂಲಗಳು ಹೇಳಿವೆ.

ಹೈಕೋರ್ಟ್ ಮೊರೆ ಹೋದ ನವಲ್ಕಾ:ಗೌತಮ್ ನವಲ್ಕಾ ಅವರನ್ನು ಪುಣೆ ಪೊಲೀಸರು ವಶಪಡಿಸಿಕೊಂಡಿರುವುದರ ವಿರುದ್ಧ ಅವರ ವಕೀಲ ದೆಹಲಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

‘ಬುಧವಾರ ಬೆಳಿಗ್ಗೆ ನವಲ್ಕಾ ಅವರ ಅರ್ಜಿಯ ವಿಚಾರಣೆ ನಡೆಸುತ್ತೇವೆ. ಅಲ್ಲಿಯವರೆಗೆ ಅವರನ್ನು ಎಲ್ಲಿಗೂ ಕರೆದುಕೊಂಡು ಹೋಗಬೇಡಿ. ಅವರು ತಮ್ಮ ಮನೆಯಲ್ಲೇ ಇರಲಿ, ವಕೀಲರ ಭೇಟಿಗೆ ಮಾತ್ರ ಅವರನ್ನು ಭೇಟಿ ಮಾಡಬಹುದು’ ಎಂದು ಪುಣೆ ಪೊಲೀಸರಿಗೆ ಹೈಕೋರ್ಟ್‌ ಸೂಚನೆ ನೀಡಿದೆ.

ಇನ್ನಷ್ಟು...

ಹೈಕೋರ್ಟ್ ಮೊರೆ ಹೋದ ನವಲಖಾ

ಹೋರಾಟಗಾರ ಗೌತಮ್ ನವಲಖಾ ಅವರನ್ನು ಪುಣೆ ಪೊಲೀಸರು ವಶಕ್ಕೆ ಪಡೆದಿರುವುದನ್ನು ಪ್ರಶ್ನಿಸಿ ಅವರ ವಕೀಲ ದೆಹಲಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ‘ಬುಧವಾರ ಬೆಳಿಗ್ಗೆ ನವಲಖಾ ಅವರ ಅರ್ಜಿಯ ವಿಚಾರಣೆ ನಡೆಸುತ್ತೇವೆ. ಅಲ್ಲಿಯವರೆಗೆ ಅವರನ್ನು ಎಲ್ಲಿಗೂ ಕರೆದುಕೊಂಡು ಹೋಗಬೇಡಿ. ಅವರು ತಮ್ಮ ಮನೆಯಲ್ಲೇ ಇರಲಿ, ವಕೀಲರ ಭೇಟಿಗೆ ಮಾತ್ರ ಅವರಿಗೆ ಅವಕಾಶ ಮಾಡಿಕೊಡಬಹುದು’ ಎಂದು ಹೈಕೋರ್ಟ್‌ ಸೂಚನೆ ನೀಡಿದೆ.

ಹಲವೆಡೆ ಏಕಕಾಲಕ್ಕೆ ಶೋಧ

ಸಾಮಾಜಿಕ ಹೋರಾಟಗಾರರಾದ ವರ್ನಾನ್ ಗೊನ್ಸಾಲ್ವಿಸ್ ಮತ್ತು ಅರುಣ್ ಫರೇರಾ ಅವರನ್ನು ಮುಂಬೈನಲ್ಲಿ ಮತ್ತು ಮತ್ತೊಬ್ಬ ಹೋರಾಟಗಾರ ಗೌತಮ ನವಲಖಾ ಅವರನ್ನು ದೆಹಲಿಯ ನಿವಾಸದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಂಚಿಯಲ್ಲಿ ಸೂಸನ್‌ ಅಬ್ರಾಹಂ, ಕ್ರಾಂತಿ ತೇಕುಲಾ ಅವರ ನಿವಾಸ ಮತ್ತು ಆನಂದ್‌ ತೇಲ್ತುಂಬ್ಡೆ ಅವರ ಪಣಜಿ ನಿವಾಸಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ.

ಭೀಮಾ ಕೋರೆಗಾಂವ್‌ ಹಿಂಸಾಚಾರದ ತನಿಖೆಯ ಭಾಗವಾಗಿ ಜೂನ್‌ನಲ್ಲಿ ರೋನಾ ಜೇಕಬ್ ವಿಲ್ಸನ್ ಸೇರಿ ಐವರನ್ನು ಬಂಧಿಸಲಾಗಿತ್ತು.

ಇದೀಗ ರೋನಾ ಜತೆ ಸಂ‍ಪರ್ಕದಲ್ಲಿದ್ದ ಆರೋಪದ ಮೇಲೆ ವರವರ ರಾವ್, ಸುಧಾ, ವರ್ನಾನ್, ಅರುಣ್, ಗೌತಮ ಅವರ ಮನೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.

‘ಎಂ4 ರೈಫಲ್ ಖರೀದಿಸಲು ಉದ್ದೇಶಿಸಿದ್ದರು...’

ಅಮೆರಿಕದ ಕೋಲ್ಟ್‌ ಕಂಪನಿ ಈ ರೈಫಲ್‌ ಅನ್ನು ತಯಾರಿಸುತ್ತದೆ. ಈ ಸರಣಿಯ ಮೊದಲ ಬಂದೂಕನ್ನು ತಯಾರಿಸಿ ಈಗಾಗಲೇ 100ಕ್ಕೂ ಹೆಚ್ಚು ವರ್ಷ ಕಳೆದಿದೆ. ಮೊದಲ ವಿಶ್ವಯುದ್ಧದಿಂದಲೂ ಅಮೆರಿಕ ಸೇನೆ ಈ ಬಂದೂಕನ್ನು ಬಳಸುತ್ತಿದೆ. ಈಗಲೂ ಈ ಸರಣಿಯ ಅತ್ಯಾಧುನಿಕ ಬಂದೂಕುಗಳನ್ನು ಅಮೆರಿಕ ಸೇನೆ ಮತ್ತು ನ್ಯಾಟೊ ಪಡೆಗಳು ಬಳಸುತ್ತಿವೆ

ಅರೆ ಸ್ವಯಂಚಾಲಿತ ಬಂದೂಕು

9 ಅವತರಣಿಕೆಗಳಲ್ಲಿ ಲಭ್ಯ

ಉದ್ದ 35.5 ಇಂಚು

600 ಮೀಟರ್. ದಾಳಿ ವ್ಯಾಪ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT