ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಸರ್ವೆ ವರದಿ ಬಹಿರಂಗ; ಮುಂದೂಡಲು ಕೋರಿದ್ದ ASI ಅರ್ಜಿ ನಿರ್ಧಾರ ಶನಿವಾರ

Published 5 ಜನವರಿ 2024, 13:18 IST
Last Updated 5 ಜನವರಿ 2024, 13:53 IST
ಅಕ್ಷರ ಗಾತ್ರ

ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ನಡೆಸಿರುವ ವೈಜ್ಞಾನಿಕ ಸರ್ವೆಯ ವರದಿಯನ್ನು ಯಾವಾಗ ಬಹಿರಂಗ ಪಡಿಸಬೇಕು ಎಂಬುದನ್ನು ವಾರಾಣಸಿ ನ್ಯಾಯಾಲಯ ಶನಿವಾರ (ಜನವರಿ 6ರಂದು) ಪ್ರಕಟಿಸಲಿದೆ.

ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಅರ್ಜಿ ಕುರಿತು ಶುಕ್ರವಾರ ವಿಚಾರಣೆ ಆರಂಭಿಸಿದರು. ಆದರೆ ಬೆರಳಚ್ಚು ಮಾಡದ ಕಾರಣ, ಆದೇಶವನ್ನು ಶನಿವಾರ ಪ್ರಕಟಿಸಲಾಗುವುದು ಎಂದು ತಿಳಿಸಿರುವುದಾಗಿ ಹಿಂದೂ ಅರ್ಜಿದಾರರ ಪರ ವಕೀಲ ಮದನ್ ಮೋಹನ್ ಯಾದವ್ ತಿಳಿಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಹಿಂದೂ, ಮುಸ್ಲಿಂ ಮತ್ತು ಭಾರತೀಯ ಪುರಾತತ್ವ ಇಲಾಖೆ (ASI) ಅಧಿಕಾರಿಗಳು ನ್ಯಾಯಾಲಯದಲ್ಲಿ ಇದ್ದರು.

ಸರ್ವೆ ವರದಿಯನ್ನು ಕಳೆದ ತಿಂಗಳು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಎಸ್‌ಐ, ಕನಿಷ್ಠ ನಾಲ್ಕು ವಾರಗಳ ಕಾಲ ಬಹಿರಂಗಪಡಿಸಬಾರದು ಎಂದು ಮನವಿ ಮಾಡಿತ್ತು. ಆದರೆ, ಕಾರಣವನ್ನು ಸ್ಪಷ್ಟವಾಗಿ ಹೇಳಿರಲಿಲ್ಲ.

ಮೊಘಲ್ ದೊರೆ ಔರಂಗಜೇಬ್‌ 17ನೇ ಶತಮಾನದಲ್ಲಿ ದೇವಸ್ಥಾನದ ಒಂದು ಭಾಗವನ್ನು ಧ್ವಂಸಗೊಳಿಸಿದ್ದ. ಬಳಿಕ ಅಲ್ಲಿ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂ ಅರ್ಜಿದಾರರು ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಔರಂಗಜೇಬ್‌ನ ಆಡಳಿತ ಅವಧಿಗಿಂತ ಮೊದಲೂ ಆ ಮಸೀದಿ ಇತ್ತು ಎಂಬುದಾಗಿ ಮುಸ್ಲಿಂ ಪ್ರತಿವಾದಿಗಳು ಪ್ರತಿಪಾದಿಸಿದ್ದರು. ಹೀಗಾಗಿ, ನ್ಯಾಯಾಲಯವು ಜುಲೈ 21ರಂದು ವೈಜ್ಞಾನಿಕ ಸರ್ವೆಗೆ ಆದೇಶಿಸಿತ್ತು.

ಡಿ. 18ರಂದು ಎಎಸ್‌ಐ ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ತಮ್ಮ ವರದಿಯನ್ನು ನೀಡಿದ್ದರು. ಆದರೆ ವರದಿಯನ್ನು ಪ್ರಕಟಿಸುವ ಅವಧಿಯನ್ನು ನಾಲ್ಕು ವಾರಗಳ ಕಾಲ ಮುಂದೂಡುವಂತೆ ಅಧಿಕಾರಿಗಳು ಇತ್ತೀಚೆಗೆ ನ್ಯಾಯಾಲಯವನ್ನು ಕೋರಿದ್ದರು.

ಈ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದ ಜಿಲ್ಲಾ ನ್ಯಾಯಾಲಯ, ಆದೇಶವನ್ನು ಶನಿವಾರ ಪ್ರಕಟಿಸುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT