ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಡಿದ್ದು ಸುಳ್ಳಾಗಬಹುದು; ಅಜ್ಜಿ–ಮೊಮ್ಮಗಳ ವೈರಲ್‌ ಫೋಟೋದ ವಾಸ್ತವ

Last Updated 25 ಆಗಸ್ಟ್ 2018, 9:42 IST
ಅಕ್ಷರ ಗಾತ್ರ

ಕೆಲದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಅಜ್ಜಿ–ಮೊಮ್ಮಗಳು ಜೊತೆಗಿರುವ ಚಿತ್ರವೊಂದು ವೈರಲ್‌ ಆಗಿತ್ತು. ಬಹುದಿನಗಳ ಬಳಿಕ ಮೊಮ್ಮಗಳನ್ನು ಕಂಡು ಭಾವುಕರಾಗಿದ್ದ ಅಜ್ಜಿ ಹಾಗೂ ಆ ಅಜ್ಜಿಯನ್ನು ಕಂಡು ಬಿಕ್ಕಿದ್ದ ಮೊಮ್ಮಗಳು ಹಾಕಿದ್ದ ಕಣ್ಣೀರು ಆ ಚಿತ್ರಕ್ಕೆ ಬೇರೆಯದೇ ಅರ್ಥ ಕಲ್ಪಿಸಿತ್ತು.

14 ವರ್ಷದ ವಿದ್ಯಾರ್ಥಿನಿ ಭಕ್ತಿ ಶೈಕ್ಷಣಿಕ ಪ್ರವಾಸದ ಭಾಗವಾಗಿ ವೃದ್ಧಾಶ್ರಮವೊಂದಕ್ಕೆ ಭೇಟಿ ನೀಡಿದ್ದ ವೇಳೆ ಅಜ್ಜಿ ಧಮಯಂತಿಯವರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದರು. ಈ ವೇಳೆ ಇಬ್ಬರೂ ಭಾವುಕವಾಗಿ ಕಣ್ಣೀರು ಹಾಕಿದ್ದರು.ಈ ಚಿತ್ರವನ್ನು ಹಿರಿಯ ಪತ್ರಕರ್ತ ಕಲ್ಪಿತ್‌ ಎಸ್‌. ಭಚೇಜ್‌ ಅವರು 2007ರಲ್ಲಿ ಕ್ಲಿಕ್ಕಿಸಿದ್ದರು.

ಬಿಬಿಸಿ ಗುಜರಾತಿ ಸುದ್ದಿ ವಾಹಿನಿ ವಿಶ್ವ ಛಾಯಾಗ್ರಾಹಕರ ದಿನದ ಆಚರಣೆ ವೇಳೆ ಪತ್ರಕರ್ತರಿಂದ ಉತ್ತಮ ಚಿತ್ರಗಳನ್ನು ಆಹ್ವಾನಿಸಿತ್ತು.ಆ ವೇಳೆ ಭಚೇಜ್‌ ಅದನ್ನು ಪ್ರಕಟಿಸಿದ್ದರು.ಅದಾದ ನಂತರ ಚಿತ್ರ ವೈರಲ್‌ ಆಗಿತ್ತು. ಅದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಹಾಗೂ ಕ್ರಿಕೆಟಿಗ ಹರಭಜನ್‌ ಸಿಂಗ್‌ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿಹಂಚಿಕೊಂಡಿದ್ದರು.

ಆ ಚಿತ್ರವನ್ನು ಹಂಚಿಕೊಂಡಿದ್ದವರ ಪ್ರಕಾರ,ನಿನ್ನ ಅಜ್ಜಿ ಸಂಬಂಧಿಕರ ಮನೆಯಲ್ಲಿದ್ದಾರೆ ಎಂದು ಸುಳ್ಳು ಹೇಳಿದ್ದ ಭಕ್ತಿಯ ತಂದೆ–ತಾಯಿ,ಧಮಯಂತಿ ಅವರನ್ನು ಮನೆಯಿಂದ ಹೊರಹಾಕಿದ್ದರು.

ಇದಕ್ಕೆ ಸಂಬಂಧಿಸಿದಂತೆ ಹಲವು ಪತ್ರಿಕೆಗಳು ಹಾಗೂ ವಾಹಿನಿಗಳು ಸುದ್ದಿ ಮಾಡಿದ್ದವು. ಹೀಗಾಗಿ ಈ ಚಿತ್ರ ದೇಶದ ಗಮನ ಸೆಳೆದಿತ್ತು.

ಆದರೆ ಸತ್ಯಾಂಶವೇ ಬೇರೆ.

ಚಿತ್ರದಲ್ಲಿದ್ದ ಇಬ್ಬರೊಡನೆ ಬಿಬಿಸಿ ಹಿಂದಿ ಸುದ್ದಿ ವಾಹಿನಿ ಫೇಸ್‌ಬುಕ್‌ನಲ್ಲಿ ನೇರ ಸಂದರ್ಶನ ನಡೆಸಿದೆ.

ಈ ವೇಳೆ ಭಕ್ತಿ, ‘ಚಿತ್ರಗಳು ವೈರಲ್‌ ಆಗಿರುವ ಬಗ್ಗೆ ಸ್ಪಷ್ಟನೆ ನೀಡುತ್ತೇನೆ. ಅಜ್ಜಿ ವೃದ್ದಾಶ್ರಮದಲ್ಲಿ ಇದ್ದಾರೆಯಾದರೂ ಅದು ಅವರದೇ ನಿರ್ಧಾರ. ಯಾರೊಬ್ಬರೂ ಅವರನ್ನು ಮನೆಯಿಂದ ಹೊರಹಾಕಿಲ್ಲ. ಅವರು ವೃದ್ಧಾಶ್ರಮಕ್ಕೆ ಹೋಗಿದ್ದಾರೆ ಎಂಬುದು ಗೊತ್ತಿತ್ತು. ಆದರೆ ಯಾವ ವೃದ್ಧಾಶ್ರಮ ಎಂಬುದು ಗೊತ್ತಿರಲಿಲ್ಲ. ಹಾಗಾಗಿ ಅಂದು ಅಜ್ಜಿಯನ್ನು ಕಂಡಾಗ ಭಾವುಕಳಾಗಿದ್ದೆ. ಈಗಲೂ ನನಗೆ ಅಜ್ಜಿಯೊಡನೆ ಆಗಿನಷ್ಟೇ ಆತ್ಮೀಯತೆ ಇದೆ’ ಎಂದು ಹೇಳಿದ್ದಾರೆ.

ಧಮಯಂತಿ ಅವರೂ ತಮ್ಮ ಮನೆಯವರ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದಾರೆ. ‘ನಾನು ಇಲ್ಲಿಗೆ ಬಂದಿರುವುದು ನೆಮ್ಮದಿಗಾಗಿ. ಮನೆಯವರು ನನ್ನನ್ನು ನೋಡಿಕೊಂಡು ಹೋಗಲು ಆಗಾಗ್ಗೆ ಇಲ್ಲಿಗೆ ಬಂದು ಹೋಗುತ್ತಾರೆ.ನಾನು ಕೂಡ ಮನೆಗೆ ಹೋಗಿ ಬರುತ್ತಿರುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT