ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯ ಮೂರನೇ ಮತ್ತು ಕೊನೆಯ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಬಿಗಿ ಭದ್ರತೆಯ ನಡುವೆ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು.
ಏಳು ಜಿಲ್ಲೆಗಳಲ್ಲಿ 40 ಕ್ಷೇತ್ರಗಳಲ್ಲಿ 39.18 ಲಕ್ಷಕ್ಕೂ ಹೆಚ್ಚು ಅರ್ಹ ಮತದಾರರು ಮತ ಚಲಾಯಿಸಲಿದ್ದಾರೆ.
ಇಬ್ಬರು ಮಾಜಿ ಉಪಮುಖ್ಯಮಂತ್ರಿಗಳಾದ ತಾರಾ ಚಂದ್ ಮತ್ತು ಮುಜಾಫರ್ ಬೇಗ್ ಸೇರಿದಂತೆ 415 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಇಂದು ನಿರ್ಧರವಾಗಲಿದೆ.
ಸಂವಿಧಾನದ 370ನೇ ವಿಧಿಯಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಪಾಕಿಸ್ತಾನದ ನಿರಾಶ್ರಿತರು, ವಾಲ್ಮೀಕಿ ಸಮಾಜ ಮತ್ತು ಗೋರ್ಖಾ ಸಮುದಾಯವು ವಿಧಾನಸಭೆ, ನಗರ ಸಭೆ ಮತ್ತು ಗ್ರಾಮಪಂಚಾಯಿತಿ ಚುನಾವಣೆಗಳಲ್ಲಿ ಮತದಾನ ಮಾಡುವ ಹಕ್ಕು ಪಡೆದಿದೆ. ಹೀಗಾಗಿ ಈ ಚುನಾವಣೆಯು ಮಹತ್ವ ಪಡೆದಿದೆ.
ಚುನಾವಣೆ ನಡೆಯುವ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ. ಅರೆಸೇನೆ ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆನಂದ್ ಜೈನ್ ತಿಳಿಸಿದ್ದಾರೆ.