ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಕ್ಫ್ ತಿದ್ದುಪಡಿ ಮಸೂದೆಗೆ ಸಮರ್ಥನೆ, ಕಾಂಗ್ರೆಸ್ ವಿರುದ್ಧ ರಿಜಿಜು ವಾಗ್ದಾಳಿ

Published : 8 ಆಗಸ್ಟ್ 2024, 16:09 IST
Last Updated : 8 ಆಗಸ್ಟ್ 2024, 16:09 IST
ಫಾಲೋ ಮಾಡಿ
Comments

ನವದೆಹಲಿ (ಪಿಟಿಐ): ವಕ್ಫ್‌ (ತಿದ್ದುಪಡಿ) ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, 1995ರ ವಕ್ಫ್‌ ಕಾಯ್ದೆಯು ತನ್ನ ಉದ್ದೇಶ ಈಡೇರಿಸುವಲ್ಲಿ ವಿಫಲವಾಗಿತ್ತು ಎಂದು ಹೇಳಿದರು.

ತರಬೇಕಾಗಿದ್ದ ಸುಧಾರಣೆಗಳನ್ನು ತರುವಲ್ಲಿ ಕಾಂಗ್ರೆಸ್ ಪಕ್ಷವು ವಿಫಲವಾಗಿದ್ದ ಕಾರಣಕ್ಕೇ ತಿದ್ದುಪಡಿಗಳನ್ನು ತರಬೇಕಾದ ಅಗತ್ಯ ಎದುರಾಯಿತು ಎಂದು ರಿಜಿಜು ಅವರು ಲೋಕಸಭೆಯಲ್ಲಿ ವಿವರಿಸಿದರು.

‘ನಿಮ್ಮಿಂದ (ಕಾಂಗ್ರೆಸ್) ಮಾಡಲು ಸಾಧ್ಯವಾಗದೆ ಇದ್ದುದಕ್ಕೆ ನಾವು ಈ ತಿದ್ದುಪಡಿಗಳನ್ನು ತರಬೇಕಾಯಿತು...’ ಎಂದರು. ‘ರಾಜ್ಯಗಳ ವಕ್ಫ್‌ ಮಂಡಳಿಗಳು ಮಾಫಿಯಾಗಳಾಗಿ ಪರಿವರ್ತನೆ ಕಂಡಿವೆ ಎಂಬ ಮಾತನ್ನು ವಿರೋಧ ಪಕ್ಷಗಳಲ್ಲಿನ ಹಲವು ನಾಯಕರು ಖಾಸಗಿಯಾಗಿ ನನ್ನಲ್ಲಿ ಹೇಳಿದ್ದಾರೆ’ ಎಂದರು.

ಆದರೆ, ಅವರ ಹೆಸರು ಬಹಿರಂಗಪಡಿಸಿ, ಅವರ ರಾಜಕೀಯ ಜೀವನ ಹಾಳುಮಾಡುವ ಕೆಲಸವನ್ನು ತಾವು ಮಾಡುವುದಿಲ್ಲ ಎಂದರು.

‘ನೀವು ಮಾಡಿರುವ ತಪ್ಪುಗಳನ್ನು ನಾವು ಈಗ ಸರಿಪಡಿಸುತ್ತಿದ್ದೇವೆ’ ಎಂದು ರಿಜಿಜು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ತಿದ್ದುಪಡಿ ತರುವ ಮೊದಲು ವ್ಯಾಪಕವಾಗಿ ಚರ್ಚೆ ನಡೆಸಲಾಗಿದೆ ಎಂದು ಹೇಳಿದ ಅವರು, ತಮಿಳುನಾಡಿನಲ್ಲಿ ಇಡೀ ಗ್ರಾಮವನ್ನು ವಕ್ಫ್‌ ಆಸ್ತಿಯೆಂದು ಘೋಷಿಸಲಾಗಿದೆ, ಸೂರತ್‌ನ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯನ್ನು ಕೂಡ ವಕ್ಫ್‌ ಆಸ್ತಿಯೆಂದು ಘೋಷಿಸಲಾಗಿದೆ, ಇವೆಲ್ಲ ಸಾಧ್ಯವಾಗಿದ್ದು ಹೇಗೆ ಎಂದು ಪ್ರಶ್ನಿಸಿದರು. ಇಂತಹ ಕ್ರಮಗಳು ಕಾನೂನಿನಲ್ಲಿ ಸುಧಾರಣೆಗಳನ್ನು ತರುವ ಅಗತ್ಯವನ್ನು ಹೇಳುತ್ತಿವೆ ಎಂದರು.

ವಿರೋಧ ಪಕ್ಷಗಳು ಇವನ್ನೆಲ್ಲ ಧರ್ಮದ ಕನ್ನಡಕ ಹಾಕಿಕೊಂಡು ನೋಡಬಾರದು ಎಂದು ಕಿವಿಮಾತು ಹೇಳಿದರು. ‘ವಕ್ಫ್‌ ಮಂಡಳಿಯ ಆದಾಯವನ್ನು ಮುಸ್ಲಿಂ ಸಮುದಾಯದವರ ಅಭಿವೃದ್ಧಿಗಾಗಿ ಮಾತ್ರ ಬಳಕೆ ಮಾಡಲಾಗುತ್ತದೆ’ ಎಂಬ ಭರವಸೆ ನೀಡಿದರು.

‘ಮುಸಲ್ಮಾನ್ ವಕ್ಫ್ ಕಾಯ್ದೆ 1923’ಅನ್ನು ರದ್ದುಪಡಿಸುವ ಮಸೂದೆಯೊಂದನ್ನು ಕೂಡ ಅವರು ಮಂಡಿಸಿದರು.

ಎನ್‌ಡಿಎ ಮಿತ್ರ ಪಕ್ಷಗಳ ಬೆಂಬಲ: ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ಜೆಡಿ(ಯು), ಟಿಡಿಪಿ, ಶಿವಸೇನಾ ಮತ್ತು ಎಲ್‌ಜೆಪಿ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದವು. ವಕ್ಫ್‌ ಮಂಡಳಿಗಳ ಕಾರ್ಯಗಳಲ್ಲಿ ಪಾರದರ್ಶಕತೆ ತರುವ ಉದ್ದೇಶವನ್ನು ಈ ಮಸೂದೆ ಹೊಂದಿದೆ, ಇದು ಮಸೀದಿಗಳ ಕಾರ್ಯಚಟುವಟಿಕೆಗಳಲ್ಲಿ ಹಸ್ತಕ್ಷೇಪ ನಡೆಸುವ ಯತ್ನ ಅಲ್ಲ ಎಂದು ಅವು ಹೇಳಿವೆ.

‘ವಕ್ಫ್‌ ಮಂಡಳಿಗೆ ಸಂಬಂಧಿಸಿದ ಕಾನೂನಿನ ತಿದ್ದುಪಡಿಯು ಮುಸ್ಲಿಂ ವಿರೋಧಿ ಎಂಬಂತೆ ಕೆಲವರು ಹೇಳುತ್ತಿದ್ದಾರೆ. ಆದರೆ, ಇದು ಮುಸ್ಲಿಂ ವಿರೋಧಿ ಹೇಗೆ? ವಕ್ಫ್‌ ಮಂಡಳಿ ರಚನೆಯಾಗಿದ್ದು ಹೇಗೆ? ಅದು ರಚನೆಯಾಗಿದ್ದೇ ಒಂದು ಕಾನೂನಿನ ಮೂಲಕ’ ಎಂದು ಜೆಡಿ(ಯು) ನಾಯಕ ಹಾಗೂ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ‘ಲಲನ್’ ಹೇಳಿದರು.

ರಿಜುಜು ಹೇಳಿದ್ದು...
  1. ತಪ್ಪುಗಳನ್ನು ಈಗ ಸರಿಪಡಿಸುತ್ತಿದ್ದೇವೆ

  2. ಇವನ್ನೆಲ್ಲ ಧರ್ಮದ ಕನ್ನಡಕ ಹಾಕಿಕೊಂಡು ನೋಡಬಾರದು

  3. ತಮಿಳುನಾಡಿನಲ್ಲಿ ಗ್ರಾಮವೊಂದನ್ನು ವಕ್ಫ್‌ ಆಸ್ತಿಯೆಂದು ಘೋಷಿಸಲಾಗಿದೆ

ಮುಸ್ಲಿಮೇತರನಾದ ನನಗೆ ಮುಸ್ಲಿಮರ ಅಭಿವೃದ್ಧಿಗಾಗಿ ಮಸೂದೆಯೊಂದನ್ನು ತರುವುದಕ್ಕೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ.
– ಕಿರಣ್ ರಿಜಿಜು ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT