ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ಲೈಂಗಿಕ ದೃಶ್ಯ ಇಟ್ಟುಕೊಳ್ಳುವುದೂ ಅಪರಾಧ: ಸುಪ್ರೀಂ ಕೋರ್ಟ್

ಪೋಕ್ಸೊ ಕಾಯ್ದೆಯಲ್ಲಿನ ವಿವರಣೆಗೆ ಸ್ಪಷ್ಟನೆ ನೀಡಿದ ಸುಪ್ರೀಂ ಕೋರ್ಟ್
Published : 23 ಸೆಪ್ಟೆಂಬರ್ 2024, 6:58 IST
Last Updated : 23 ಸೆಪ್ಟೆಂಬರ್ 2024, 6:58 IST
ಫಾಲೋ ಮಾಡಿ
Comments

ನವದೆಹಲಿ/ಬೆಂಗಳೂರು: ಮಕ್ಕಳ ಲೈಂಗಿಕ ಚಿತ್ರಗಳನ್ನು, ದೃಶ್ಯಗಳನ್ನು ಇಟ್ಟುಕೊಳ್ಳುವುದು ಕೂಡ ಪೋಕ್ಸೊ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಅಪರಾಧ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.

ಆ ಚಿತ್ರ, ದೃಶ್ಯಗಳನ್ನು ಬೇರೆಯವರಿಗೆ ರವಾನಿಸದೆ ಇದ್ದರೂ, ಅವುಗಳನ್ನು ಇಟ್ಟುಕೊಳ್ಳುವುದು ಅಪರಾಧವೆಂದೇ ಪರಿಗಣಿತವಾಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

‘ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುವುದು ಬಹಳ ವ್ಯಾಪಕವಾಗಿದೆ, ಇದು ಜಗತ್ತಿನಾದ್ಯಂತ ವಿವಿಧ ಸಮುದಾಯಗಳನ್ನು ಪಿಡುಗಾಗಿ ಕಾಡುತ್ತಿದೆ, ಭಾರತದಲ್ಲಿ ಇದು ಗಂಭೀರ ಕಳವಳಕ್ಕೆ ಕಾರಣವಾಗಿದೆ’ ಎಂದು ಹೇಳಿರುವ ಕೋರ್ಟ್, ಈ ವಿಚಾರವಾಗಿ ಮದ್ರಾಸ್ ಹೈಕೋರ್ಟ್‌ ನೀಡಿದ್ದ ಆದೇಶವು ತಪ್ಪಾಗಿತ್ತು ಎಂದು ಹೇಳಿದೆ. ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿದೆ.

ಮಕ್ಕಳು ಇರುವ ಲೈಂಗಿಕ ಚಿತ್ರ, ದೃಶ್ಯಗಳನ್ನು ತನ್ನ ಮೊಬೈಲ್‌ ಫೋನ್‌ಗೆ ಡೌನ್‌ಲೋಡ್‌ ಮಾಡಿಕೊಂಡ ಆರೋಪದ ಅಡಿ 28 ವರ್ಷ ವಯಸ್ಸಿನ ಎಸ್. ಹರೀಶ್‌ ಎನ್ನುವವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಜನವರಿ 11ರಂದು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್, ಇಂತಹ ದೃಶ್ಯ, ಚಿತ್ರಗಳನ್ನು ಡೌನ್‌ಲೋಡ್‌ ಮಾಡಿ, ಅವುಗಳನ್ನು ಇರಿಸಿಕೊಂಡ ಮಾತ್ರಕ್ಕೆ ಅದು ಪೋಕ್ಸೊ ಹಾಗೂ ಮಾಹಿತಿ ತಂತ್ರಜ್ಞಾನ (ಐ.ಟಿ) ಕಾಯ್ದೆಗಳ ಅಡಿಯಲ್ಲಿ ಅಪರಾಧ ಕೃತ್ಯವಾಗುವುದಿಲ್ಲ ಎಂದು ಹೇಳಿತ್ತು.

‘ಈ ಆದೇಶ ನೀಡುವ ಮೂಲಕ ಹೈಕೋರ್ಟ್‌ ಬಹಳ ತಪ್ಪು ಮಾಡಿದೆ ಎಂಬ ನಿರ್ಣಯಕ್ಕೆ ನಾವು ಬಂದಿದ್ದೇವೆ. ಈ ಆದೇಶವನ್ನು ಅಸಿಂಧುಗೊಳಿಸುವುದನ್ನು ಹೊರತುಪಡಿಸಿದರೆ ನಮಗೆ ಬೇರೆ ಆಯ್ಕೆ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ಅವರು ಇದ್ದ ವಿಭಾಗೀಯ ಪೀಠವು ತೀರ್ಪಿನಲ್ಲಿ ಹೇಳಿದೆ. ಯುವಕನ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳು ಮುಂದುವರಿಯಲಿವೆ.

‘ಮಕ್ಕಳ ಲೈಂಗಿಕ ಚಿತ್ರ, ದೃಶ್ಯ’ ಎಂಬ ಪದಗಳ ಬದಲಿಗೆ, ‘ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ ಮತ್ತು ದೌರ್ಜನ್ಯ ನಡೆಸಿದ ವಸ್ತು–ವಿಷಯ’ ಎನ್ನುವ ವಿವರಣೆಯನ್ನು ಪೋಕ್ಸೊ ಕಾಯ್ದೆಯಲ್ಲಿ ಸೇರಿಸುವ ಬಗ್ಗೆ ಗಂಭೀರ ಪರಿಶೀಲನೆ ನಡೆಸಬೇಕು ಎಂದು ಪೀಠವು ಸಂಸತ್ತಿಗೆ ಹೇಳಿದೆ. ಇಂತಹ ಅಪರಾಧಿಕ ಕೃತ್ಯಗಳಲ್ಲಿನ ವಾಸ್ತವವನ್ನು ಹೆಚ್ಚು ನಿಖರವಾಗಿ ವಿವರಿಸುವ ದೃಷ್ಟಿಯಿಂದ ಈ ಬದಲಾವಣೆ ಬೇಕು ಎಂದು ಪೀಠ ತಿಳಿಸಿದೆ.

ಪೋಕ್ಸೊ ಕಾಯ್ದೆಗೆ ಈ ತಿದ್ದುಪಡಿಯನ್ನು ಸಂಸತ್ತಿನ ಮೂಲಕ ತರುವವರೆಗೆ, ತಿದ್ದುಪಡಿಯನ್ನು ಸುಪ್ರೀವಾಜ್ಞೆಯ ಮೂಲಕ ಜಾರಿಗೆ ತರಲು ಕೇಂದ್ರ ಸರ್ಕಾರ ಪರಿಶೀಲಿಸಬಹುದು ಎಂದು ಪೀಠವು ಸೂಚಿಸಿದೆ.

ನ್ಯಾಯಾಲಯಗಳು ಇನ್ನು ಮುಂದೆ ಆದೇಶಗಳಲ್ಲಿ ‘ಮಕ್ಕಳ ಲೈಂಗಿಕ ಚಿತ್ರ, ದೃಶ್ಯ’ ಎಂಬ ಪದಗಳನ್ನು ಬಳಸುವ ಬದಲಿಗೆ, ‘ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ ಮತ್ತು ದೌರ್ಜನ್ಯ ನಡೆಸಿದ ವಸ್ತು–ವಿಷಯ’ ಎಂಬ ವಿವರಣೆಯನ್ನು ಬಳಸಬೇಕು ಎಂದು ಪೀಠವು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT