ಅಕ್ರಮವನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ: ತರೂರ್
ನವದೆಹಲಿ: ವಯನಾಡ್ ದುರಂತಕ್ಕೆ ಅಕ್ರಮ ಒತ್ತುವರಿ ಕಾರಣವಾಗಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಸದ್ಯ ಸಂತ್ರಸ್ತರು ದೈಹಿಕವಾಗಿ ಮಾನಸಿಕವಾಗಿ ಕುಗ್ಗಿದ್ದು ಅವರತ್ತ ಹೆಚ್ಚು ಗಮನ ನೀಡಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಸೋಮವಾರ ಹೇಳಿದರು. ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಕೇರಳ ಸರ್ಕಾರವು ಸೂಕ್ಷ್ಮ ಪ್ರದೇಶದಲ್ಲಿ ಮಾನವ ವಾಸಸ್ಥಾನದ ಅಕ್ರಮ ವಿಸ್ತರಣೆ ಮತ್ತು ಗಣಿಗಾರಿಕೆಗೆ ಅವಕಾಶ ನೀಡಿರುವುದೇ ಭೂಕುಸಿತಕ್ಕೆ ಕಾರಣ ಎಂದು ಹೇಳಿದ್ದಕ್ಕೆ ಹೀಗೆ ಪ್ರತಿಕ್ರಿಯೆ ನೀಡಿದರು. ‘ಅಕ್ರಮ ನಡೆದಿದ್ದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅಕ್ರಮವನ್ನು ಯಾರೂ ಸ್ವಾಗತಿಸುವುದೂ ಇಲ್ಲ. ಸಮಿತಿಯು ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭಾವಿಸುತ್ತೇನೆ’ ಎಂದು ಹೇಳಿದರು. ‘ಸದ್ಯದ ಪರಿಸ್ಥಿತಿಯಲ್ಲಿ ಭೂಕುಸಿತದಿಂದಾಗಿ ಎಲ್ಲವನ್ನೂ ಕಳೆದುಕೊಂಡಿರುವ ಜನರತ್ತ ಗಮನ ನೀಡಿ ಅವರನ್ನು ಸಂತೈಸುವುದು ನಮ್ಮ ಆದ್ಯತೆಯಾಗಬೇಕು’ ಎಂದು ಹೇಳಿದರು.