‘ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪ್ರಸ್ತುತತೆ ಕಾಪಾಡಿಕೊಳ್ಳಲಿಕ್ಕಾಗಿ ಮಮತಾ ಅವರು ಇಂಡಿಯಾ ಒಕ್ಕೂಟವನ್ನು ಬೆಂಬಲಿಸುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಟೀಕಿಸಿದ್ದಾರೆ. ‘ಇಂಡಿಯಾ ಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಈ ಕಾರಣದಿಂದ ಕುಟಿಲ ಹಾಗೂ ಅವಕಾಶವಾದಿ ನಾಯಕಿ ಮಮತಾ ಅವರು ಇಂಡಿಯಾ ಕೂಟಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ’ ಎಂದರು. ‘ಮತದಾರರು ಇಂಡಿಯಾ ಕೂಟವನ್ನು ಬೆಂಬಲಿಸುತ್ತಿದ್ದಾರೆ ಎಂಬುದು ಮಮತಾಗೆ ಮನವರಿಕೆಯಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ತಾನು ಏಕಾಂಗಿಯಾಗಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ರಾಷ್ಟ್ರ ರಾಜಕಾರಣದಲ್ಲಿ ಉಳಿಯಲು ಅವರು ಮಾಡಿರುವ ತಂತ್ರ ಇದು’ ಎಂದು ಆರೋಪಿಸಿದರು.