ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ವಿಚಿತ್ರವಾದ, ಉಸಿರುಗಟ್ಟಿಸುವಂತಹ ಮೌನ ಮತ್ತೆ ಮನೆ ಮಾಡಿದೆ. ಈ ಮೌನವು ಶಾಂತಿಯ ಕಾರಣದಿಂದಾಗಿ ಉಂಟಾಗಿರುವಂಥದ್ದಲ್ಲ; ಭೀತಿಯ ಕಾರಣದಿಂದಾಗಿ ಸೃಷ್ಟಿಯಾಗಿರುವಂಥದ್ದು.

ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟಿನ ಬಿಸಿಯು ಜಮ್ಮು ಮತ್ತು ಕಾಶ್ಮೀರದ ಗಡಿಯ ಆಚೆಗೂ, ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿಯೂ ಅನುಭವಕ್ಕೆ ಬಂದಿದೆ. ಇತ್ತ ಕಾಶ್ಮೀರದ ಜನರಿಗೆ ಹಿಂದಿನ ಬಿಕ್ಕಟ್ಟಿನ ಸಂದರ್ಭಗಳ ನೆನಪುಗಳು ಕಾಡಲಾರಂಭಿಸಿವೆ. ಮುಂದಿನ ಅನಿಶ್ಚಿತ ದಿನಗಳ ಬಗ್ಗೆ ಚಿಂತೆ ಶುರುವಾಗಿದೆ.

ಕಣಿವೆಯ ಮಾರುಕಟ್ಟೆಗಳಲ್ಲಿ, ಮನೆಗಳಲ್ಲಿ, ಕಚೇರಿಗಳಲ್ಲಿ ನಡೆಯುವ ಮಾತುಕತೆಗಳು ಲವಲವಿಕೆಯನ್ನು ಕಳೆದುಕೊಂಡಿವೆ. ಮನೆಗಳಲ್ಲಿ ಜನರು ಟಿ.ವಿ. ಪರದೆಗಳ ಎದುರು ಆತಂಕದಿಂದ ಸೇರುತ್ತಿದ್ದಾರೆ, ಸುದ್ದಿವಾಹಿನಿಗಳನ್ನು ಒಂದಾದ ನಂತರ ಇನ್ನೊಂದರಂತೆ ಬದಲಾಯಿಸುತ್ತಿದ್ದಾರೆ. ಹದಿಹರೆಯದವರು, ಹಿರಿಯರು ತಮ್ಮ ಸ್ಮಾರ್ಟ್ಫೋನ್ ಪರದೆಗಳ ಮೇಲೆ ಕಣ್ಣು ನೆಟ್ಟಿದ್ದಾರೆ, ಹೊಸ ಸುದ್ದಿ ಏನಿದೆ ಎಂಬುದನ್ನು ಸ್ಮಾರ್ಟ್ಫೋನ್ ಮೂಲಕ ಗಮನಿಸುತ್ತಿದ್ದಾರೆ.

‘ಬಾಂಬುಗಳು ದೆಹಲಿ, ಇಸ್ಲಾಮಾಬಾದ್ ಮೇಲೆ ಬೀಳುವುದಿಲ್ಲ. ಅವು ಇಲ್ಲಿ ಬೀಳುತ್ತವೆ’ ಎಂದು ಗಡಿಗೆ ಹತ್ತಿರವಿರುವ ಉರಿ ಪಟ್ಟಣದ ಶಾಲಾ ಶಿಕ್ಷಕಿ ರುಬೀನಾ ಜಾನ್ ಹೇಳಿದರು. ‘ಭೀತಿಯು ವಾಸ್ತವದಲ್ಲಿ ನಮ್ಮಿಂದ ದೂರವಾಗುವುದೇ ಇಲ್ಲ. ಅದು ನಮ್ಮ ಮನೆಗಳ ಮೂಲೆಗಳಲ್ಲಿ, ನಮ್ಮ ಮಕ್ಕಳ ಕನಸುಗಳಲ್ಲಿ ಅವಿತು ಕುಳಿತಿರುತ್ತದೆ’ ಎಂದು ಅವರು ಹೇಳುತ್ತಾರೆ.

ಕಾಶ್ಮೀರದ ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿಯೂ ಅಚ್ಚೊತ್ತಿರುವ ಸಂಗತಿಯೊಂದನ್ನು ಅವರ ಮಾತುಗಳು ಧ್ವನಿಸುತ್ತಿವೆ: ತಾವು ನಿರ್ಧಾರ ತೆಗೆದುಕೊಳ್ಳುವವರಲ್ಲ, ಆದರೆ ಎಲ್ಲ ಬಾರಿಯೂ ಭಾರಿ ಬೆಲೆ ತೆರುವವರು ತಾವು.

ಯುದ್ಧದ ಕಾರ್ಮೋಡವು ಹಳೆಯ ನೆನಪುಗಳನ್ನು ಮತ್ತೆ ಕೆದಕಿದೆ – ರಾತ್ರಿಯ ಆಗಸದಲ್ಲಿ ಸದ್ದು ಮಾಡುವ ವೈಮಾನಿಕ ದಾಳಿ, ಕೊನೆಯಿಲ್ಲದ ಕರ್ಫ್ಯೂ, ಮನೆಯ ಹಿಂದೆ ನಿರ್ಮಿಸುವ ಬಂಕರ್ಗಳು, ಪರ್ವತಗಳಿಂದ ಕೇಳಿಸುವ ಸೈರನ್ ಶಬ್ದ, ಶಾಲೆಗಳು ಆಶ್ರಯ ಶಿಬಿರಗಳಾಗುವುದು... ಇವೆಲ್ಲ ಆ ನೆನಪುಗಳು.

ಗಡಿ ಭಾಗದ ಪಟ್ಟಣಗಳಾದ ಉರಿ, ಕೆರನ್, ಪೂಂಚ್, ರಜೌರಿಯಲ್ಲಿ ಕುಟುಂಬಗಳು ತಮ್ಮ ವಸ್ತುಗಳನ್ನು ಕಟ್ಟಿಕೊಂಡು ಸುರಕ್ಷಿತ ಸ್ಥಳ ಅರಸಿ ಹೊರಟಿವೆ. ‘ಯುದ್ಧ ಅಂದರೆ ನಾವು ನಮ್ಮ ಮನೆ ತೊರೆದು ಸಾಯಬೇಕೇ ಎಂದು 10 ವರ್ಷ ವಯಸ್ಸಿನ ನನ್ನ ಮಗ ನಿನ್ನೆ ರಾತ್ರಿ ಪ್ರಶ್ನಿಸಿದ. ಇದಕ್ಕೆ ಅಪ್ಪನಾಗಿ ಏನು ಉತ್ತರ ಕೊಡಬೇಕು’ ಎಂದು ಕುಪ್ವಾರಾದಲ್ಲಿ ಟಂಗಧರ್ನ ಇಫ್ತಿಕಾರ್ ಅಹಮದ್ ಎನ್ನುವವರು ನಡುಗುವ ದನಿಯಲ್ಲಿ ಹೇಳಿದರು.

ಕಣಿವೆಯ ಮನಃಶಾಸ್ತ್ರಜ್ಞರು ಈಗಾಗಲೇ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ‘ಕಾಶ್ಮೀರದಲ್ಲಿ ಸಮುದಾಯಗಳ ಮಟ್ಟದಲ್ಲಿ ಮಾನಸಿಕ ಆಘಾತ ಆಗಿದೆ. ಈಗಿನ ಪರಿಸ್ಥಿತಿಯು ಹೊಸದಾಗಿ ಭೀತಿ ಸೃಷ್ಟಿಸಬಹುದು. ಅದರಲ್ಲೂ ಮುಖ್ಯವಾಗಿ, ದೀರ್ಘ ಅವಧಿಯ ಅಶಾಂತಿಯನ್ನು ಕಂಡವರಲ್ಲಿ ಈ ರೀತಿ ಆಗಬಹುದು’ ಎಂದು ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಮನಃಶಾಸ್ತ್ರದ ಪ್ರೊಫೆಸರ್ ಡಾ. ಆರ್ಷಿದ್ ಹುಸೇನ್ ಹೇಳಿದರು.

ಗಡಿ ಪ್ರದೇಶಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಶ್ರೀನಗರದಂತಹ ನಗರ ಪ್ರದೇಶಗಳ ಶಾಲೆಗಳಲ್ಲಿ ಹಾಜರಾತಿ ಕಡಿಮೆ ಆಗುತ್ತಿದೆ, ಸುರಕ್ಷತೆಯ ಖಾತರಿ ಇಲ್ಲವಾದ ಕಾರಣ ಪಾಲಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸುತ್ತಿಲ್ಲ. ಇಲ್ಲಿನವರನ್ನು ಬಾಂಬುಗಳು, ಗುಂಡುಗಳ ಭೀತಿಗಿಂತ ಹೆಚ್ಚು ನೋಯಿಸುತ್ತಿರುವುದು ಅಸಹಾಯಕತೆ.

‘ನಾವು ಯುದ್ಧರಂಗದಲ್ಲಿ ಇರುವವರಲ್ಲ. ಹೀಗಿದ್ದರೂ ಯುದ್ಧ ನಮ್ಮನ್ನು ಅರಸಿ ಬರುತ್ತದೆ. ನಮ್ಮ ಭವಿಷ್ಯ ಅನಿಶ್ಚಿತವಾಗಿದೆ... ನಾವು ಆರಂಭಿಸಿರದ, ನಿಲ್ಲಿಸಲು ನಮ್ಮಿಂದ ಸಾಧ್ಯವಿರದ ಕದನದ ನೆರಳಿನಲ್ಲಿ ನಾವು ಬದುಕುತ್ತಿದ್ದೇವೆ’ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿ ಫರ್ಜಾನಾ ಮಿರ್ ಹೇಳಿದರು.

ಕಣಿವೆಯಲ್ಲಿ ರಾತ್ರಿಯಾಗುತ್ತಿದ್ದಂತೆ ಭೀತಿಯು ಮಾತಿಗಿಂತ ಹೆಚ್ಚು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.