ಕೋಲ್ಕತ್ತ: ಪಶ್ಚಿಮ ಬಂಗಾಳದ ಟಿಎಂಸಿ ಮುಖಂಡನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಸಿದವರಿಗೆ ₹10 ಕೋಟಿ ಬಹುಮಾನ ಘೋಷಿಸಿದ್ದ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪೊಲೀಸರಿಗೆ ಹೇಳಿದೆ.
ಕೋಲ್ಕತ್ತದಲ್ಲಿರುವ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ 24 ಪರಗಣ ಜಿಲ್ಲೆಯ ವ್ಯಕ್ತಿಯೊಬ್ಬ ವಿಡಿಯೊ ಮೂಲಕ ಈ ಹೇಳಿಕೆ ನೀಡಿದ್ದ. ಈ ಕುರಿತು ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
‘ಆರ್.ಜಿ. ಕರ್ ಆಸ್ಪತ್ರೆಯ ದುರಂತದ ಆಘಾತದಲ್ಲಿ ಇಡೀ ರಾಜ್ಯವೇ ಮುಳುಗಿರುವ ಸಂದರ್ಭದಲ್ಲಿ, ಮತ್ತೊಂದು ಅತ್ಯಾಚಾರಕ್ಕೆ ಕರೆ ನೀಡಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಸಮಾಜಕ್ಕೆ ತೀವ್ರ ಅಪಾಯಕಾರಿ ಹೇಳಿಕೆಯಾಗಿದ್ದು, ಇದರ ವಿರುದ್ಧ ಕ್ರಮ ಜರುಗಿಸದಿದ್ದರೆ ಹೆಣ್ಣು ಮಕ್ಕಳಿಗೆ ದೊಡ್ಡ ಅಪಾಯವೇ ಎದುರಾಗುವ ಸಂಭವವಿದೆ’ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಈ ಕುರಿತಂತೆ ಆಯೋಗದ ಅಧ್ಯಕ್ಷೆ ತುಲಿಕಾ ದಾಸ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರದ ಮೂಲಕ ಕೋರಿಕೆ ಸಲ್ಲಿಸಿದ್ದಾರೆ. ‘ಎಫ್‌ಐಆರ್ ಹಾಗೂ ಇತರ ದಾಖಲೆಗಳೊಂದಿಗೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು. ಅದರ ವರದಿಯನ್ನು 2 ದಿನಗಳ ಒಳಗಾಗಿ ಸಲ್ಲಿಸಿದಲ್ಲಿ, ಆಯೋಗವು ಮುಂದಿನ ಕ್ರಮ ತೆಗೆದುಕೊಳ್ಳಲು ಅನುಕೂಲವಾಗಲಿದೆ’ ಎಂದಿದ್ದಾರೆ.
ವ್ಯಕ್ತಿಯೊಬ್ಬನ ಈ ಹೇಳಿಕೆಯ ವಿರುದ್ಧ ಕಿಡಿಯಾಡಿರುವ ಟಿಎಂಎಸ್ ಸಂಸದ ಡೆರೆಕ್ ಒಬ್ರಯಾನ್, ‘ನಿಮ್ಮ ಹೊಲಸು ತಂತ್ರಗಳನ್ನು ಬಳಸಿ ನಮ್ಮ ವಿರುದ್ಧ ರಾಜಕೀಯವಾಗಿ ಹೋರಾಡಿ. ಇದನ್ನು ಈ ಹಿಂದೆಯೂ ಮಾಡಿದ್ದೀರಿ. ಆದರೆ ಇಂದು ನೀವು ನಿಮ್ಮ ಮಿತಿಯನ್ನು ಮೀರಿದ್ದೀರಿ. ಮಕ್ಕಳನ್ನು ಬೆದರಿಸುವುದನ್ನು ನಿಲ್ಲಿಸಿ. ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಮಗಳ ಕುರಿತ ನಿಮ್ಮ ಈ ಕೊಳಕು ಹೇಳಿಕೆಯನ್ನು ಖಂಡಿಸಲು ಪದಗಳು ಸಾಲದು’ ಎಂದಿದ್ದಾರೆ.
Fight us politically with your filthy tricks. You have done it before. But today you have crossed the line. Stop threatening kids. No words enough to condemn the gutter level threats to our National General Secretary’s daughter. STOP THIS NOW.
— Derek O'Brien | ডেরেক ও'ব্রায়েন (@derekobrienmp) August 26, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.