ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ ಹಿಂಸಾಚಾರ: ಮೃತರ ಸಂಖ್ಯೆ 15ಕ್ಕೆ ಏರಿಕೆ

ಚುನಾವಣಾ ಅಕ್ರಮ ಖಂಡಿಸಿ ವಿವಿಧ ಪಕ್ಷಗಳಿಂದ ಪ್ರತಿಭಟನೆ
Published 9 ಜುಲೈ 2023, 13:20 IST
Last Updated 9 ಜುಲೈ 2023, 13:20 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಪಶ್ಚಿಮ ಗಬ್ಟಾಲಾದ ಮತದಾನ ಕೇಂದ್ರವೊಂದರ ಬಳಿ ಅಬು ಸಲೀಂ ಖಾನ್‌ ಎಂಬುವವರ ಮೃತದೇಹ ಭಾನುವಾರ ಪತ್ತೆಯಾಗಿದೆ ಮತ್ತು ಗಲಭೆಯಲ್ಲಿ ಗಾಯಗೊಂಡಿದ್ದ ಇತರ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದೂ ವಿವರಿಸಿದ್ದಾರೆ.

ಅಬು ಸಲೀಂ ಖಾನ್‌ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಕಾರ್ಯಕರ್ತರಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತದೇಹ ಪತ್ತೆಯಾದ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಿಂಸಾಚಾರದ ವೇಳೆ ಗಾಯಗೊಂಡಿದ್ದ ಟಿಎಂಸಿ ಕಾರ್ಯಕರ್ತ ಅಜರ್‌ ಲಷ್ಕರ್‌ ಎಂಬುವವರು ಕೋಲ್ಕತ್ತದ ಆಸ್ಪತ್ರೆಯಲ್ಲಿ ಹಾಗೂ ಮಾಲ್ಡಾ ಜಿಲ್ಲೆಯ ಬೈಶಾನ್‌ನಗರದಲ್ಲಿ ಇರಿತಕ್ಕೊಳಗಾಗಿದ್ದ ಟಿಎಂಸಿ ಕಾರ್ಯಕರ್ತ ಮೋತಿಯುರ್ ರೆಹಮಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಕಾರ್ಯಕರ್ತರು ಮತಪೆಟ್ಟಿಗೆಗಳಲ್ಲಿ ಅಕ್ರಮ ನಡೆಸುತ್ತಿದ್ದುದನ್ನು ತಡೆಯಲು ಮುಂದಾಗಿದ್ದ ವೇಳೆ ಮೋತಿಯುರ್ ರೆಹಮಾನ್‌ ಇರಿತಕ್ಕೊಳಗಾಗಿದ್ದರು ಎಂದು ಟಿಎಂಸಿ ಆರೋಪಿಸಿದೆ. ಈ ಆರೋಪವನ್ನು ಕಾಂಗ್ರೆಸ್‌ ತಳ್ಳಿ ಹಾಕಿದೆ.

ಹಿಂಸಾಚಾರದಲ್ಲಿ ಒಂಬತ್ತು ಮಂದಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಟಿಎಂಸಿ ಹೇಳಿದೆ. ತನ್ನ ಮೂವರು ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಕಾಂಗ್ರೆಸ್‌ ತಿಳಿಸಿದೆ. 

ತಮ್ಮ ಪಕ್ಷದ ಇಬ್ಬರು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಸಿಪಿಎಂನ ಇಬ್ಬರು ಕಾರ್ಯಕರ್ತರು ಕೂಡ ಮೃತಪಟ್ಟಿರುವುದಾಗಿ ಆ ಪಕ್ಷ ಹೇಳಿದೆ. ಆದರೆ ಈ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

ಹಿಂಸಾಚಾರದಲ್ಲಿ ಮೃತಪಟ್ಟವರ ಕುರಿತು 24 ಗಂಟೆಗಳೊಳಗೆ ವರದಿ ನೀಡುವಂತೆ ರಾಜ್ಯ ಚುನಾವಣಾ ಆಯೋಗವು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಕೂಚ್‌ಬೆಹರ್‌ ಜಿಲ್ಲೆಯ ದಿನ್ಹಾತಾದ 32 ಮತಗಟ್ಟೆಗಳಲ್ಲಿ ಮರುಮತದಾನ ನಡೆದಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧೆಡೆ ಪ್ರತಿಭಟನೆ:

ಚುನಾವಣೆ ವೇಳೆ ನಡೆದ ಹಿಂಸಾಚಾರ ಮತ್ತು ಅಕ್ರಮಗಳನ್ನು ಖಂಡಿಸಿ ಪಶ್ಚಿಮ ಬಂಗಾಳದ ವಿವಿಧೆಡೆ ಭಾನುವಾರ ಪ್ರತಿಭಟನೆಗಳು ನಡೆದಿವೆ.

ಪರ್ಬಾ ಮೇದಿನಿಪುರ ಜಿಲ್ಲೆಯ ನಂದಕುಮಾರ್‌ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಹಲ್ಡಿಯಾ-ಮೆಚೆಡಾ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯುಂಟು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಲ್ಡಾದ ರಥ್‌ಬರಿ ಪ್ರದೇಶದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆದಿದ್ದಾರೆ.

‘ಹಿಂಸಾಚಾರ ಖಂಡಿಸಿ ನಾವು ವಿವಿಧೆಡೆ ಪ್ರತಿಭಟನೆ ನಡೆಸಿದ್ದೇವೆ ಮತ್ತು ನ್ಯಾಯಾಲಯದ ಮೊರೆ ಹೋಗಲಿದ್ದೇವೆ’ ಎಂದು ಕಾಂಗ್ರೆಸ್‌ ಸಂಸದ ಅಬು ಹಸೇಮ್ ಖಾನ್ ಚೌಧರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT